ಮನೆ ಕಾನೂನು ರಾಜಕಾಲುವೆ ಒತ್ತುವರಿ: 2,052 ಒತ್ತುವರಿ ತೆರವು ಮಾಡಿರುವ ಬಗ್ಗೆ ಹೈಕೋರ್ಟ್’ಗೆ ಅಫಿಡವಿಟ್ ಸಲ್ಲಿಸಿದ ಬಿಬಿಎಂಪಿ

ರಾಜಕಾಲುವೆ ಒತ್ತುವರಿ: 2,052 ಒತ್ತುವರಿ ತೆರವು ಮಾಡಿರುವ ಬಗ್ಗೆ ಹೈಕೋರ್ಟ್’ಗೆ ಅಫಿಡವಿಟ್ ಸಲ್ಲಿಸಿದ ಬಿಬಿಎಂಪಿ

0

ಬೆಂಗಳೂರಿನ ರಾಜಕಾಲುವೆಗಳ ಪ್ರದೇಶದಲ್ಲಿ ನಡೆದಿರುವ ಒಟ್ಟು 2,666 ಒತ್ತುವರಿ ಪ್ರಕರಣಗಳ ಪೈಕಿ ಈವರೆಗೆ 2,052 ಒತ್ತುವರಿ ತೆರವು ಮಾಡಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್’ಗೆ ಬುಧವಾರ ಮಾಹಿತಿ ನೀಡಿದೆ.

ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಕೋರಿ ಸಿಟಿಜನ್ ಆಕ್ಷನ್ ಗ್ರೂಪ್ ಸೇರಿದಂತೆ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು ರಾಜಕಾಲುವೆಗೆ ಸೇರಿದ ಜಾಗದ ಒತ್ತುವರಿಯ ತೆರವು ಕಾರ್ಯಚರಣೆಗೆ ಸಂಬಂಧಿಸಿದಂತೆ ಪಾಲಿಕೆಯ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಎಂ ಲೋಕೇಶ್ ಅವರ ಅಫಿಡವಿಟ್ ಅನ್ನು ಪೀಠಕ್ಕೆ ಸಲ್ಲಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ಸಮೀಕ್ಷೆ ನಡೆಸಿ ಗುರುತಿಸಿರುವ 40 ಪ್ರಕರಣಗಳು ಸೇರಿದಂತೆ ಒಟ್ಟು 2,666 ಕಡೆ ರಾಜಕಾಲುವೆ ಒತ್ತುವರಿಗಳ ಪೈಕಿ ಅಕ್ಟೋಬರ್ 11ರವರೆಗೆ 2,052 ಒತ್ತುವರಿಗಳನ್ನು ತೆರವು ಮಾಡಲಾಗಿದೆ. ಉಳಿದ 614 ಒತ್ತುವರಿಗಳಲ್ಲಿ 110 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿದ್ದು, 504 ಒತ್ತುವರಿಗಳನ್ನು ತೆರವುಗೊಳಿಸಬೇಕಿದೆ ಎಂದು ಅಫಿಡವಿಟ್ನಲ್ಲಿ ಉಲ್ಲೇಖಿಸಲಾಗಿದೆ.

ಕೊಳಚೆ ನಿವಾಸಿಗಳಿಂದ ಒತ್ತುವರಿ: ಸುಬ್ರಹ್ಮಣ್ಯಪುರ ಕೆರೆ ಪ್ರದೇಶದಲ್ಲಿ 3.39 ಎಕರೆ ಜಾಗವನ್ನು ಕೊಳಚೆ ನಿವಾಸಿಗಳು ಒತ್ತುವರಿ ಮಾಡಿದ್ದಾರೆ. ಈ ಒತ್ತುವರಿಯನ್ನು ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ತೆರವುಗೊಳಿಸಬೇಕು ಎಂದು 2022ರ ಸೆಪ್ಟೆಂಬರ್ 12ರಂದು ಹೈಕೋರ್ಟ್ ನಿರ್ದೇಶಿಸಿತ್ತು. ಆ ಸಂಬಂಧ ವಿಚಾರಣೆಗೆ ಹಾಜರಾದ ಕೊಳಚೆ ನಿರ್ಮೂಲನೆ ಮಂಡಳಿ ಪರ ವಕೀಲರು, ಸುಬ್ರಹ್ಮಣ್ಯ ಪುರ ಕೆರೆ ಜಾಗದಲ್ಲಿ ಕೊಳಚೆ ಪ್ರದೇಶಗಳಲ್ಲಿನ ನಿವಾಸಿಗಳು ಒತ್ತುವರಿ ಮಾಡಿರುವ ಪ್ರದೇಶವನ್ನು ಕೊಳಚೆ ಪ್ರದೇಶವಾಗಿ ಅಧಿಸೂಚಿಸಿಲ್ಲ. ಹೀಗಾಗಿ, ಆ ಕೊಳಚೆ ಪ್ರದೇಶದಲ್ಲಿನ ನಿವಾಸಿಗಳನ್ನು ತೆರವುಗೊಳಿಸುವುದಕ್ಕೆ ಮಂಡಳಿಗೆ ಅಧಿಕಾರ ಇಲ್ಲವಾಗಿದ್ದು, ಸೆಪ್ಟೆಂಬರ್ 12ರ ಆದೇಶವನ್ನು ಮಾರ್ಪಡಿಸಬೇಕು ಎಂದು ಕೋರಿದರು.

ಬಿಬಿಎಂಪಿ ಪರ ವಕೀಲರಾದ ಶ್ರೀನಿಧಿ ಅವರು ಸುಬ್ರಹ್ಮಣ್ಯ ನಗರ ಮತ್ತು ಬೇಗೂರು ಕೆರೆಗಳಲ್ಲಿ ಒತ್ತುವರಿಯಾಗಿದ್ದ ಶೇ.50ರಷ್ಟನ್ನು ಈಗಾಗಲೇ ತೆರವು ಮಾಡಲಾಗಿದೆ. ಇನ್ನುಳಿದ ಶೇ.50ರಷ್ಟು ಒತ್ತುವರಿಯ ತೆರವು ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರಿಸಿದರು.ಅದಕ್ಕೆ ಪೀಠವು ಸಂಪೂರ್ಣ ತೆರವು ಮಾಡಿ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಸೂಚಿಸಿತು.

ಈ ಮಧ್ಯೆ ಅರ್ಜಿದಾರೊಬ್ಬರ ಪರ ವಕೀಲ ಜಿ ಆರ್ ಮೋಹನ್ ಅವರು ಸಣ್ಣ ಒತ್ತುವರಿದಾರರ ಪ್ರಕರಣಗಳನ್ನು ಮಾತ್ರ ಬಿಬಿಎಂಪಿ ಗುರುತಿಸಿದೆ. ಆದರೆ, ರಾಜಕಾರಣಿಗಳು ಮತ್ತು ದೊಡ್ಡ ಬಿಲ್ಡರ್ ಕಂಪೆನಿಗಳ ಒತ್ತುವರಿಗಳನ್ನು ಕೈಬಿಡಲಾಗಿದೆ ಎಂದು ಪೀಠಕ್ಕೆ ವಿವರಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿತು.