ರಾಮನಗರ: ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ ಶಿವರಾಜ್ ಎಂಬುವವರ ಆರು ತಿಂಗಳ ಶರಣ್ಯ ಎಂಬ ಕಂದಮ್ಮ ಸಾವನ್ನಪ್ಪಿದೆ. ವೈದ್ಯಕೀಯ ಕೋರ್ಸ್ ಮಾಡದೇ, ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಸಣ್ಣ ಕೋಣೆಯಲ್ಲಿ ಚಿಕಿತ್ಸೆ ನೀಡಿದ ನಕಲಿ ವೈದ್ಯ ಮಹಮ್ಮದ್ ಸೈಫುಲ್ಲ ಎಂಬಾತನಿಂದಾಗಿ ಮಗು ಬಾರದ ಲೋಕಕ್ಕೆ ತೆರಳಿದೆ. ಇದು ಜಿಲ್ಲೆಯ ಜನರನ್ನು ಸಾಕಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ಬಿಳಿಗಿರಿರಂಗನಬೆಟ್ಟದ ಶಿವರಾಜ್ ಎಂಬುವವರ ಪುತ್ರಿ ಶರಣ್ಯ, ಜ್ವರ ಹಾಗೂ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಅವರು ರಾಮನಗರದ ನಕಲಿ ಕ್ಲಿನಿಕ್‌ಗೆ ಕರೆದೊಯ್ದಿದ್ದರು. ಮಹಮ್ಮದ್ ಸೈಫುಲ್ಲ ಎಂಬಾತ ಯಾವುದೇ ವೈದ್ಯಕೀಯ ವಿದ್ಯಾಭ್ಯಾಸ ಇಲ್ಲದೆ ಕ್ಲಿನಿಕ್ ನಡೆಸುತ್ತಿದ್ದ. ಈ ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ ಮಗುವಿನ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದ್ದು, ಮಗು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ.
ಜಿಲ್ಲಾ ಆರೋಗ್ಯ ಇಲಾಖೆದ ವರದಿಯ ಪ್ರಕಾರ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಒಟ್ಟು 193 ದಾಖಲಾತಿಯುಳ್ಳ ಆಸ್ಪತ್ರೆಗಳು ಮಾತ್ರ ಕಾನೂನುಬದ್ಧವಾಗಿವೆ. ಇತ್ತೀಚಿನ ನಾಲ್ಕು ತಿಂಗಳಲ್ಲಿ ಆರು ನಕಲಿ ವೈದ್ಯರು ಪತ್ತೆಯಾಗಿದ್ದಾರೆ, ಆದರೆ ಇನ್ನೂ ಹಲವರು ನಕಲಿ ಕ್ಲಿನಿಕ್ ನಡೆಸುತ್ತಿರುವ ಶಂಕೆಯಿದೆ.
ಮಗುವಿನ ಸಾವಿನ ಬಗ್ಗೆ ಗಂಭೀರವಾಗಿ ಗಮನ ಹರಿಸಿರುವ ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಕಲಿ ಕ್ಲಿನಿಕ್‌ಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ನಕಲಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ವರ್ತಿಸಿ, ಮಾಹಿತಿ ದೊರೆತರೆ ತಕ್ಷಣ ಜಿಲ್ಲಾ ಆರೋಗ್ಯಾಧಿಕಾರಿ ಅಥವಾ ಪೋಲೀಸರಿಗೆ ತಿಳಿಸಲು ಮನವಿ ಮಾಡಲಾಗಿದೆ.
ಡಾ. ನಿರಂಜನ್, ಜಿಲ್ಲಾ ಆರೋಗ್ಯಾಧಿಕಾರಿ ಮಾತನಾಡುತ್ತಾ, ನಿಜವಾದ ವೈದ್ಯರನ್ನು ಮಾತ್ರ ಭೇಟಿಯಾಗಬೇಕು. ನೋಂದಾಯಿತ ಆಸ್ಪತ್ರೆಗಳಿಗೆ ಮಾತ್ರ ಹೋಗಬೇಕು. ಇಲ್ಲವಾದರೆ ಜೀವವನ್ನೇ ಕಳೆದುಕೊಳ್ಳುವ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ.














