ಬೆಂಗಳೂರು: “ಬೀಜ ಮಂತ್ರವಾಗಿದ್ದ ರಾಮ ನಾಮವು ತಾರಕ ಮಂತ್ರವಾಗಿ ಇದೀಗ “ಜೈ ಶ್ರೀರಾಮ್” ಎಂಬ ಶೌರ್ಯ ಮಂತ್ರವಾಗಿ ರಾಮಭಕ್ತರಲ್ಲಿ ಹೊಸ ಉಮೇದನ್ನು ಮೂಡಿಸಿದೆ” ಎಂದು ಉತ್ತರ ಕನ್ನಡದ ಲೋಕಸಭಾ ಸದಸ್ಯ ಅನಂತ್ ಕುಮಾರ್ ಹೆಗಡೆ ಅಭಿಪ್ರಾಯಪಟ್ಟರು. ಜನಪ್ರಿಯ ಲೇಖಕ ಎಸ್ ಉಮೇಶ್ ರಚಿಸಿರುವ “ಅಯೋಧ್ಯಾ” ಕೃತಿಯ ಮೊದಲ ಪ್ರತಿಯನ್ನು ಹಿರಿಯ ಪತ್ರಕರ್ತ ರವೀಂದ್ರ ಜೋಶಿ ಅವರಿಂದ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
“ಅಯೋಧ್ಯ ಎನ್ನುವ ಪದವೇ ಸೋಲು ಇರಲಾರದು ಎಂದರ್ಥವುಳ್ಳದ್ದು. ಹೀಗಾಗಿ ಆಕ್ರಮಣ ನಡೆದರೂ ಕೂಡ ಅಯೋಧ್ಯೆ ಪದೇಪದೇ ಪುನರುಜ್ಜಿವನಗೊಂಡಿದೆ. ಇದೀಗ ವೈಭವದ ರಾಮ ರಾಜ್ಯ ನಿರ್ಮಾಣವಾಗಿದೆ. ರಾಮ ಎನ್ನುವ ಪದ ಈ ದೇಶದ ಅಸ್ಮಿತೆ, ಸ್ವಾಭಿಮಾನದ ಪ್ರತೀಕ. ರಾಮನಾಮ ಇಲ್ಲಿಯ ಜನರ ಉಸಿರು. ಹೀಗಾಗಿ ಎಷ್ಟೇ ದೌರ್ಜನ್ಯ ನಡೆದರೂ ಈ ದೇಶದ ನೆಲದ ಸಂಸ್ಕೃತಿಯಿಂದ ರಾಮ ನಾಮವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ” ಎಂದವರು ನುಡಿದರು.
ಲೇಖಕ ಉಮೇಶ್ ಮಾತನಾಡಿ “ಕಳೆದ ಎರಡು ವರ್ಷಗಳ ನಿರಂತರ ಅಧ್ಯಯನದ ಫಲಶ್ರುತಿ ನನ್ನ ಈ ಕೃತಿ. ಈ ಪುಸ್ತಕ ರಚನೆಯಲ್ಲಿ ನನಗೆ ಹಲವರ ಸಹಾಯ ದೊರೆತಿದೆ. ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥರ ಆಶೀರ್ವಾದದಿಂದ ಪ್ರಾರಂಭಗೊಂಡ ಈ ಸಾರಸ್ವತ ಯಜ್ಞ ಹಲವರ ಸಹಾಯದಿಂದಾಗಿ ಸಾಕಾರಗೊಂಡಿರುವಂಥದ್ದು. ರಾಮ ಜನ್ಮ ಭೂಮಿ ಟ್ರಸ್ಟ್ ನ ಗೋಪಾಲ್ ಜಿ, ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಚಂಪತ್ ರಾಯ್, ಉಚ್ಚ ನ್ಯಾಯಾಲಯದ ವಕೀಲ ಮೋಹನ್ ಪರಾಶರನ್ ಅವರ ಯೋಗದಾನ ಈ ಕೃತಿಯಲ್ಲಿದೆ. ರಾಮ ಜನ್ಮ ಭೂಮಿಯ ಹೋರಾಟದ ಸಂಪೂರ್ಣ ಕಥನವನ್ನು ಇಲ್ಲಿ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ ಕನ್ನಡದ ಜನತೆಗೆ ಅಯೋಧ್ಯೆಯ ಹೋರಾಟ ತಲುಪಲಿ ಎಂಬ ಸದಾಶಿವದೊಂದಿಗೆ ಬರೆದಂತಹ ಕೃತಿ ಇದು. ಓದುಗರು ಇದನ್ನ ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು” ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಧಾತ್ರಿ ಪ್ರಕಾಶನದ ಪ್ರಕಾಶಕಿ ಬೃಂದಾ ಉಮೇಶ್ “ಈ ಕೃತಿ ಕರ್ನಾಟಕದ ಎಲ್ಲ ಪುಸ್ತಕ ಮಳಿಗೆಗಳಲ್ಲೂ ಲಭ್ಯವಿದೆ” ಎಂದು ತಿಳಿಸಿದರು.