ಮೈಸೂರು: ರಾಮೇಶ್ವರ ಕಾಫೆ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಎನ್.ಐ. ಎ ತಂಡ ಮತ್ತು ಕರ್ನಾಟಕ ಪೊಲೀಸ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಘಿಸಿದ್ದಾರೆ.
ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಆರೋಪಿಗಳನ್ನು ಕೋಲ್ಕತ್ತಾದಿಂದ ಬೆಂಗಳೂರಿಗೆ ಕರೆ ತಂದ ನಂತರ ವಿಚಾರಣೆ ಮಾಡಿ ಹೆಚ್ಚಿನ ವಿವರ ಪಡೆಯಲಾಗುವುದು ಎಂದರು.
ಎನ್. ಡಿ ಎ ಗೆ ಪೂರ್ಣ ಬಹುಮತ ದೊರಕುವುದಿಲ್ಲ
ಎನ್. ಡಿ ಎ ಗೆ ಪೂರ್ಣ ಬಹುಮತ ದೊರಕುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಬಿಜೆಪಿ ವಿರುದ್ಧವಿರುವ ಇಂಡಿಯಾ ಮೈತ್ರಿಗೆ ಬಹುಮತ ದೊರೆಯಲಿದೆ ಎಂದರು. 400 ಕ್ಕೂ ಹೆಚ್ಚು ಸ್ಥಾನಪಡೆಯುವುದಾಗಿ ಹೇಳಿಕೊಳ್ಳುತ್ತಿರುವ ಬಿಜೆಪಿಯದ್ದು ಜನರ ದಾರಿತಪ್ಪಿಸುವ ಕಾರ್ಯತಂತ್ರ ಎಂದರು.
ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ಉತ್ತರಿಸಲಿ
ಮೋದಿಯವರು ನಾಳೆ ಮೈಸೂರಿಗೆ ಆಗಮಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಮೋದಿಯವರು ಬಂದು ಹೋಗಲು ನನ್ನದೇನೂ ತಕರಾರಿಲ್ಲ. ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ಹೇಳಬೇಕು. ನಿರುದ್ಯೋಗ, ತೆರಿಗೆ ಹಂಚಿಕೆ, ಬರಗಾಲಕ್ಕೆ ಇಂದಿನವರೆಗೂ ಯಾಕೆ ಪರಿಹಾರ ನೀಡಿಲ್ಲ ಎಂಬುದಕ್ಕೆಲ್ಲಾ ಉತ್ತರ ಹೇಳಲಿ ಎಂದರು.
ಅನಂತಕುಮಾರ್ ಹೆಗಡೆ ಮೇಲೆ ಕ್ರಮ ಏಕಿಲ್ಲ
ಅಂಬೇಡ್ಕರ್ ಬಂದರೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ. ಬಿಜೆಪಿ ಸಂವಿಧಾನದ ಪರವಾಗಿದೆ ಎಂದು ಮೋದಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಹಾಗಾದರೆ ಅನಂತಕುಮಾರ್ ಹೆಗಡೆ ಮೇಲೆ ಕ್ರಮ ಯಾಕೆ ತೆಗೆದುಕೊಂಡಿಲ್ಲ. ಅವರನ್ನು ಪಕ್ಷದಿಂದ ಅಥವಾ ಮಂತ್ರಿ ಸ್ಥಾನದಿಂದ ಕೈಬಿಟ್ಟರೇ ಎಂದು ಪ್ರಶ್ನಿಸಿದರು. ಉತ್ತರ ಕರ್ನಾಟಕದಲ್ಲಿ ಐದು ವರ್ಷಗಳಿಂದ ಏನೂ ಕೆಲಸ ಮಾಡದೇ ಮನೆಯಲ್ಲಿ ಕುಳಿತಿದ್ದರು. ಕೊನೇ 3-4 ತಿಂಗಳು ಬಂದು ಸೋಲುವ ವರದಿಯಾಧಾರದ ಮೇಲೆ ಅನಂತಕುಮಾರ್ ಅವರಿಗೆ ಟಿಕೆಟ್ ಕೊಟ್ಟಿಲ್ಲ ಎಂದರು.
ಬಿಜೆಪಿ ಯಾವತ್ತೂ ಸಂವಿಧಾನದ ಪರವಾಗಿಲ್ಲ ಬಿಜೆಪಿ ಯಾವತ್ತೂ ಸಂವಿಧಾನದ ಪರವಾಗಿಲ್ಲ. ಸಂವಿಧಾನ ಜಾರಿ ಯಾದಾಗ ಸಾವರ್ಕರ್ ಹಾಗು ಗೋಲ್ವಾಲ್ಕರ್ ಅವರು ಭಾರತದ ಸಂವಿಧಾನವನ್ನು ವಿರೋಧಿಸಿದ್ದರು ಎಂದರು.