ನವದೆಹಲಿ (New Delhi): ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಶಹನವಾಜ್ ಹುಸೇನ್ ಅವರು ತಮ್ಮ ವಿರುದ್ಧದ ಅತ್ಯಾಚಾರ ಆರೋಪ ಸಂಬಂಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ದೆಹಲಿ ಹೈಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ಗುರುವಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ಪೀಠದ ಅರ್ಜಿಯ ವಿಚಾರಣೆ ನಡೆಸಿ, ತುರ್ತು ವಿಚಾರಣೆಗೆ ಸಮ್ಮತಿಸಿ, ಮುಂದಿನ ವಾರವೇ ವಿಚಾರಣೆ ನಡೆಸುವುದಾಗಿ ಹೇಳಿದೆ.
ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಶಹನವಾಜ್ ಅವರಿಗೆ ಹೈಕೋರ್ಟ್‌ನಲ್ಲೂ ಹಿನ್ನಡೆಯಾಗಿದೆ. ನ್ಯಾಯಮೂರ್ತಿ ಆಶಾ ಮೆನನ್ ಅವರಿದ್ದ ಏಕ ಸದಸ್ಯ ಪೀಠವು ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ, ಸೆಕ್ಷನ್ 173ರ ಅಡಿಯಲ್ಲಿ ಸಮಗ್ರ ವರದಿ ಸಲ್ಲಿಸಬೇಕೆಂದು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತ್ತು.
2018ರ ಏಪ್ರಿಲ್‌ನಲ್ಲಿ ದೆಹಲಿಯ ಫಾರ್ಮ್‌ಹೌಸ್‌ನಲ್ಲಿ ಹುಸೇನ್ ಅವರು ಮಾದಕ ದ್ರವ್ಯ ಕುಡಿಸಿ ಅತ್ಯಾಚಾರವೆಸಗಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೆಹಲಿ ಮೂಲದ ಸಂತ್ರಸ್ತ ಮಹಿಳೆ ದೂರು ನೀಡಿದ್ದರು.
ತಮ್ಮ ಸಹೋದರನೊಂದಿಗೆ ವೈವಾಹಿಕ ವಿವಾದ ಹೊಂದಿದ್ದ ದೂರುದಾರ ಮಹಿಳೆ, ಅದರ ಪರಿಣಾಮ ಈ ಸುಳ್ಳು ಆರೋಪ ಮಾಡಿದ್ದಾರೆ ಎಂದು ಶಹನವಾಜ್ ಹೇಳಿಕೊಂಡಿದ್ದಾರೆ.
ಪೊಲೀಸರು ಪ್ರಕರಣ ಸಂಬಂಧ ಸೂಕ್ತ ಸಾಕ್ಷ್ಯಗಳಿಲ್ಲವೆಂದು 2018ರ ಜುಲೈನಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಕೂಡ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ಈ ಆದೇಶದ ವಿರುದ್ಧ ಶಹನವಾಜ್ ಅವರು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದು, ಅಲ್ಲಿಯೂ ಕೇಂದ್ರ ಮಾಜಿ ಸಚಿವರಿಗೆ ಹಿನ್ನೆಡೆಯಾಗಿತ್ತು.