ಮನೆ ಕ್ರೀಡೆ ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ 10 ವಿಕೆಟ್‌ ಗಳ ಭರ್ಜರಿ ಜಯ

ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ 10 ವಿಕೆಟ್‌ ಗಳ ಭರ್ಜರಿ ಜಯ

0

ಹರಾರೆ (Harare): ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಒಡಿಐ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಪಡೆದುಕೊಂಡಿದೆ.

ಜಿಂಬಾಬ್ವೆ ನೀಡಿದ್ದ 190 ರನ್‌ ಸಾಧಾರಣ ಗುರಿ ಹಿಂಬಾಲಿಸಿದ ಭಾರತ ತಂಡ ಆರಂಭಿಕರಾದ ಶಿಖರ್ ಧವನ್‌ (81*) ಹಾಗೂ ಶುಭಮನ್‌ ಗಿಲ್‌ (82*) ಅರ್ಧಶತಕಗಳ ಬಲದಿಂದ 30.5 ಓವರ್‌ಗಳಿಗೆ ವಿಕೆಟ್‌ ನಷ್ಟವಿಲ್ಲದೆ 192 ರನ್‌ ಗಳಿಸಿ ಗೆಲುವಿನ ದಡ ಸೇರಿತು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದ ಶಿಖರ್‌ ಧವನ್ 113 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ ಅಜೇಯ 81 ರನ್‌ ಗಳಿಸಿದರು.

ಶಿಖರ್‌ ಧವನ್‌ಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ ಯುವ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌, ಆರಂಭದಲ್ಲಿ ತಾಳ್ಮೆಯಿಂದ ಆಡಿದರೂ, ಅಂತಿಮ ಹಂತದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದರು. ಎದುರಿಸಿದ 72 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 10 ಬೌಂಡರಿಯೊಂದಿಗೆ ಅಜೇಯ 82 ರನ್‌ ಚಚ್ಚಿದರು. ಧವನ್‌ ಹಾಗೂ ಗಿಲ್‌ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 192 ರನ್‌ ಗಳಿಸಿ ಭಾರತ ಗೆಲುವಿನ ನಗೆ ಬೀರುವಂತೆ ಮಾಡಿದರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ ತಂಡ ಭಾರತ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್‌ ದಾಳಿಗೆ ನಲುಗಿ 40.3 ಓವರ್‌ಗಳಿಗೆ 189 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಟೀಮ್‌ ಇಂಡಿಯಾಗೆ 190 ರನ್‌ ಸಾಧಾರಣ ಮೊತ್ತದ ಗುರಿಯನ್ನು ನೀಡಿತ್ತು.

ಭಾರತ ತಂಡದ ಮಾರಕ ದಾಳಿಯನ್ನು ಎದುರಿಸುವಲ್ಲಿ ಜಿಂಬಾಬ್ವೆ ತಂಡ ಅಗ್ರ ಕ್ರಮಾಂಕದ ಐವರು ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ನಾಯಕ ರೇಗಿಸ್‌ ಚಕಾಬ್ವ( 35 ರನ್‌) ಹಾಗೂ ಕೆಳ ಕ್ರಮಾಂಕದಲ್ಲಿ ಬ್ರಾಡ್‌ ಈವನ್ಸ್‌(33*) ಮತ್ತು ರಿಚರ್ಡ್‌ ಗರಾವ(34) ಗಳಿಸಿದ ನಿರ್ಣಾಯಕ ರನ್‌ಗಳಿಂದ ಜಿಂಬಾಬ್ವೆ 189 ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಯಿತು.

ಗಾಯದಿಂದಾಗಿ ಸತತ ಐದು ತಿಂಗಳುಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ವೇಗಿ ದೀಪಕ್‌ ಚಹರ್‌, ಕಮ್‌ಬ್ಯಾಕ್‌ ಮಾಡಿದ ತಮ್ಮ ಮೊದಲನೇ ಪಂದ್ಯದಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದರು. ಬೌಲ್‌ ಮಾಡಿದ 7 ಓವರ್‌ಗಳಿಗೆ ಕೇವಲ 27 ರನ್‌ ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದರು. ಇವರಿಗೆ ಬೌಲಿಂಗ್‌ನಲ್ಲಿ ಸಾಥ್‌ ನೀಡಿದ ಪ್ರಸಿದ್ಧ್ ಕೃಷ್ಣ ಹಾಗೂ ಅಕ್ಷರ್‌ ಪಟೇಲ್‌ ತಲಾ 3 ವಿಕೆಟ್‌ಗಳನ್ನು ಪಡೆದುಕೊಂಡರು.

ಸಂಕ್ಷಿಪ್ತ ಸ್ಕೋರ್‌

ಜಿಂಬಾಬ್ವೆ: 40. 3 ಓವರ್‌ಗಳಿಗೆ 189/10 ( ಬ್ರಾಡ್‌ ಈವನ್ಸ್‌ 33*, ರಿಚರ್ಡ್‌ ಗರಾವ 34, ರೇಗಿಸ್‌ ಚಕಾಬ್ವ 35; ದೀಪಕ್‌ ಚಹರ್‌ 27ಕ್ಕೆ 3, ಪ್ರಸಿಧ್‌ ಕೃಷ್ಣ 50ಕ್ಕೆ 3, ಅಕ್ಷರ್‌ ಪಟೇಲ್‌ 24ಕ್ಕೆ 3)

ಭಾರತ: 30.5 ಓವರ್‌ಗಳಿಗೆ 192/0 (ಶಿಖರ್‌ ಧವನ್‌ 81*, ಶುಭಮನ್‌ ಗಿಲ್‌ 82*)

ಹಿಂದಿನ ಲೇಖನಡೋಲೊ ಮಾತ್ರೆ ಶಿಫಾರಸ್ಸು ಮಾಡಲು ವೈದ್ಯರಿಗೆ 1 ಕೋಟಿ ರೂ.: ಸುಪ್ರೀಂ ಕೋರ್ಟ್‌ ಗೆ ಮಾಹಿತಿ
ಮುಂದಿನ ಲೇಖನಅತ್ಯಾಚಾರ ಆರೋಪ ಪ್ರಕರಣ: ಬಿಜೆಪಿ ನಾಯಕ ಶಹನವಾಜ್ ಹುಸೇನ್ ಸುಪ್ರೀಂ ಮೊರೆ