ಕೆ.ಆರ್.ಪೇಟೆ: ವಸತಿ ನಿಲಯದಲ್ಲಿ ಓದುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಇಬ್ಬರು ಯುವಕರು ಬೈಕಿನಲ್ಲಿ ಅಪಹರಣ ಮಾಡಿಕೊಂಡು ಹೊಸಹೊಳಲು ಗ್ರಾಮದ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಸಂತ್ರಸ್ಥೆ ದೂರು ನೀಡಿದ ಒಂದೂವರೆ ಗಂಟೆಯ ಅವಧಿಯಲ್ಲಿಯೇ ಬಂಧಿಸಿರುವ ಘಟನೆ ನಡೆದಿದೆ.
ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ವಡ್ಡರಹಟ್ಟಿ ಗ್ರಾಮದ ಶಿವಣ್ಣ ಅವರ ಮಗ ವಿ.ಎಸ್.ಜಗದೀಶ್, ಶಂಕರ್ ಅವರ ಮಗ ವಿ.ಎಸ್.ದೀಪು ಬಂಧಿತ ಆರೋಪಿಗಳು.
ಘಟನೆ ವಿವರ: ಮೇ.28ರಂದು ಸಂಜೆ ಸುಮಾರು 4ಗಂಟೆ ಸಮಯದಲ್ಲಿ ಪಟ್ಟಣದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಇದ್ದ ವಿದ್ಯಾರ್ಥಿಯೊಬ್ಬಳನ್ನು ಆರೋಪಿಗಳಾದ ವಿ.ಎಸ್.ಜಗದೀಶ್ ಮತ್ತು ವಿ.ಎ್.ದೀಪು ಮಾತನಾಡಿಸುವ ನೆಪದಲ್ಲಿ ಹಾಸ್ಟೆಲ್ ನಿಂದ ಹೊರಗಡೆ ಕರೆದಿದ್ದಾರೆ. ಆಗ ಟಿ.ಬಿ.ವೃತ್ತದ ಬಳಿಯ ಮುಖ್ಯ ರಸ್ತೆಗೆ ಬಂದ ವಿದ್ಯಾರ್ಥಿನಿಯನ್ನು ತಮ್ಮ ಬೈಕ್ ನಲ್ಲಿ ಬಲವಂತವಾಗಿ ಕೂರಿಸಿಕೊಂಡು ಹೋಗಿ
ಹೊಸಹೊಳಲು ಸಮೀಪದ ಇಟ್ಟಿಗೆ ಫ್ಯಾಕ್ಟರಿ ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಬೈಕ್ ನಿಲ್ಲಿಸಿ, ಇಬ್ಬರು ಸೇರಿ ಸಂಜೆ ಸುಮಾರು 4-45 ಗಂಟೆ ಸಮಯದಲ್ಲಿ ವಿದ್ಯಾರ್ಥಿನಿಯನ್ನು ಬೆದರಿಸಿ ಬೆತ್ತಲೆ ಮಾಡಿ, ಮೊಬೈಲ್ ನಿಂದ ಬೆತ್ತಲೆ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಜಗದೀಶ್ ಮೊದಲು ಅತ್ಯಾಚಾರ ಮಾಡಿದ್ದಾನೆ. ಅನಂತರ ದೀಪು ಸಹ ಬಲವಂತದಿಂದ ಅತ್ಯಾಚಾರ ಮಾಡಿದ್ದಾನೆ. ಮೋಸದಿಂದ ಬಲವಂತದಿಂದ ಅತ್ಯಾಚಾರ ಮಾಡಿದ್ದನ್ನು ಪ್ರಶ್ನಿಸಿದ ವಿದ್ಯಾರ್ಥಿನಿಗೆ ದೈಹಿಕ ಹಲ್ಲೆ ನಡೆಸಿದ್ದಾನೆ.
ಕೊನೆಗೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕಿ ಕೆ.ಆರ್.ಪೇಟೆ ಮಹಿಳಾ ಕಾಲೇಜು ಬಳಿ ಬೈಕಿನಿಂದ ಕೆಳಕ್ಕೆ ಇಳಿಸಿ ಹೊರಟು ಹೋದರು ಎಂದು ಸಂತ್ರಸ್ಥ ವಿದ್ಯಾರ್ಥಿನಿ ಕೆ.ಆರ್.ಪೇಟೆ ಪಟ್ಟಣ ಪೋಲಿಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೂರು ಸ್ವೀಕರಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಆನಂದೇಗೌಡ ಮತ್ತು ಪಿ.ಎಸ್.ಐ ನವೀನ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡವು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಡಾ. ಯತೀಶ್ ಕುಮಾರ್, ಎ.ಎಸ್.ಪಿ ತಿಮ್ಮಯ್ಯ, ಡಿವೈಎಸ್ ಪಿ ಡಾ.ಸುಮಿತ್ ಅವರ ಮಾರ್ಗದರ್ಶನದಲ್ಲಿ ದೂರು ದಾಖಲಾದ ಕೇವಲ ಒಂದೂವರೆ ಗಂಟೆಯಲ್ಲಿ ಆರೋಪಿಗಳನ್ನು ನಾಗಮಂಗಲದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನ್ಯಾಯಾಧೀಶರ ಆದೇಶದ ಮೇರೆಗೆ ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಆರೋಪಿಗಳನ್ನು ಬಂಧಿಸಲು ರಚಿಸಿದ್ದ ತನಿಖಾ ತಂಡದಲ್ಲಿ ರಘು, ಜೀಸನ್, ಅರುಣ್ ಕುಮಾರ್, ವೈರಮುಡಿ, ಜಯವರ್ಧನ್ ಭಾಗವಹಿಸಿದ್ದರು.
ಪೋಲೀಸರ ಕ್ಷಿಪ್ರ ಕಾರ್ಯಾಚರಣೆಯನ್ನು ಸಾರ್ವಜನಿಕರು ಪ್ರಶಂಸಿದ್ದಾರೆ.