ಬೆಂಗಳೂರು: ಪೂಜೆ ನೆಪದಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ದೇವಾಲಯದ ಪೂಜಾರಿಯೊಬ್ಬನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ಮೂಲದ ದಯಾನಂದ್ (39) ಬಂಧಿತ ಆರೋಪಿ.
ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ 26 ವರ್ಷದ ಯುವತಿ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಯುವತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ದಯಾನಂದ್ಗೆ ಈಗಾಗಲೇ ಮದುವೆ ಯಾಗಿ ಎರಡು ಮಕ್ಕಳಿದ್ದು, ಅರಸೀಕೆರೆಯ ಪುರದಮ್ಮ ದೇವಾಲಯದ ಪೂಜಾರಿಯಾಗಿದ್ದಾನೆ. ಯುವತಿ ಕೂಡ ಅದೇ ಊರಿನವಳಾಗಿದ್ದು, ಶಾಸ್ತ್ರ ಕೇಳಲು ದೇವಾ ಲಯಕ್ಕೆ ಹೋದಾಗ ಆರೋಪಿಯ ಪರಿಚಯವಾಗಿದ್ದು, ನಂತರ ಯುವತಿಗೆ ನಿಂಬಿಹಣ್ಣು ಮಂತ್ರಿಸಿ ಕೊಡುತ್ತಿದ್ದ. ಅದನ್ನು ಯುವತಿ ತಲೆ ದಿಂಬಿನಡಿ ಇಟ್ಟುಕೊಂಡು ಮಲಗುತ್ತಿದ್ದಳು. ನಂತರದ ದಿನಗಳಲ್ಲಿ ಇಬ್ಬರು ಆತ್ಮೀಯರಾಗಿದ್ದರು ಎನ್ನಲಾಗಿದೆ.
ದೋಷ ಪರಿಹಾರಕ್ಕೆ ಪೂಜೆ ಮಾಡುವುದಾಗಿ ಹೇಳಿ ಯುವತಿಯ ಬಳಿ ಹಣ ಕೂಡ ಪಡೆದಿದ್ದ. ಯುವತಿಯನ್ನು ಭೇಟಿ ಮಾಡಲು ಬೆಂಗಳೂರಿಗೂ ಸಹ ಆರೋಪಿ ಆಗಾಗ್ಗೆ ಬರುತ್ತಿದ್ದ ಎಂದು ಹೇಳಲಾಗಿದೆ.
ವಶೀಕರಣ ಮಾಡಿದ್ದರಿಂದ ಆತ ಹೇಳಿದ್ದಂತೆ ನಾನು ಕೇಳುತ್ತಿದ್ದೆ. ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದರ ವಿಡಿಯೋ ಮಾಡಿಕೊಂಡಿದ್ದಾನೆ. ನನ್ನನ್ನು ಮದುವೆಯಾಗಬೇಕು. ಇಲ್ಲವಾದರ ವಿಡಿಯೋ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸುತ್ತಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.














