ಮನೆ ಅಪರಾಧ ವೃದ್ಧ ದಂಪತಿ ಕೊಲೆ: ಆರೋಪಿಗಳ ಬಂಧನ

ವೃದ್ಧ ದಂಪತಿ ಕೊಲೆ: ಆರೋಪಿಗಳ ಬಂಧನ

0

ದಾವಣಗೆರೆ:  ದಾವಣಗೆರೆಯ ಎಲೇಬೇತೂರಿನಲ್ಲಿ ನಡೆದಿದ್ದ ವೃದ್ಧ ದಂಪತಿ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಎಲೇಬೇತೂರು ಗ್ರಾಮದ ಕುಮಾರನಾಯ್ಕ, ಹರಪನಹಳ್ಳಿ ಹಾಗೂ ಕೂಡ್ಲಿಗಿ ತಾಲೂಕಿನ ಮರಿಯಪ್ಪ, ಪರಶುರಾಮ್‌ ಬಂಧಿತ ಆರೋಪಿಗಳಾಗಿದ್ದಾರೆ.

ಜನವರಿ 24ರ ರಾತ್ರಿ 8.30 ರಿಂದ 8.45ರ ಸುಮಾರಿಗೆ ಎಲೇಬೇತೂರಿನಲ್ಲಿ ವಾಸವಾಗಿದ್ದ 82 ವರ್ಷದ ಗುರುಸಿದ್ದಯ್ಯ ಹಾಗೂ 72 ವರ್ಷದ ಸರೋಜಮ್ಮ ಹತ್ಯೆಯಾಗಿತ್ತು.

ಹತ್ಯೆಗೆ ಕಾರಣವೇನು:

ಎಲೇಬೇತೂರು ಗ್ರಾಮದ ಕುಮಾರನಾಯ್ಕ ಗುರುಸಿದ್ದಯ್ಯರ ಬಳಿ ಎರಡು ತಿಂಗಳ ಹಿಂದೆಯಷ್ಟೇ 3 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಇದಕ್ಕೆ ಪ್ರತಿಯಾಗಿ ತನ್ನ ಪತ್ನಿಯ 40 ಗ್ರಾಂ ಚಿನ್ನದ ಸರವನ್ನು ಅಡವಿಟ್ಟಿದ್ದ, ಕೊರೊನಾ ಸೋಂಕು ಹಿನ್ನಲೆಯಲ್ಲಿ ಕೆಲಸವೂ ಇರಲಿಲ್ಲ. ಬೆಂಗಳೂರಿನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಕುಮಾರನಾಯ್ಕ ಸಾಲ ತೀರಿಸಿ ಚಿನ್ನದ ಸರ ವಾಪಸ್ ಪಡೆಯುವ ಬಗ್ಗೆ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದರಿಂದ ಕಂಗೆಟ್ಟಿದ್ದ ಇದರಿಂದಾಗಿ ಜೂಜಾಟದಲ್ಲಿ ಪರಿಚಯವಾಗಿದ್ದವರ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕುಮಾರನಾಯ್ಕ ತನಗೆ ಪರಿಚಯವಿದ್ದ ಮರಿಯಪ್ಪ ಹಾಗೂ ಪರಶುರಾಮ್ ಜೊತೆಗೂಡಿ ನಿಮಗೆ ಹಣ, ಒಡವೆ ಸಿಗುತ್ತದೆ. ನಾನು ಮಾಡುವ ಕೆಲಸಕ್ಕೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದ. ಇದಕ್ಕೆ ಒಪ್ಪಿದ ಆರೋಪಿಗಳು ಕಳೆದ ತಿಂಗಳು ಜನವರಿ 24ರಂದು ದಾವಣಗೆರೆಯ ಎಲೇಬೇತೂರಿಗೆ ಬಂದಿದ್ದಾರೆ. ಗುರುಸಿದ್ದಯ್ಯ ಪರಿಚಯವಿದ್ದ ಕಾರಣ ಸಂಜೆಯ ಹೊತ್ತಿಗೆ ನೇರವಾಗಿ ಮನೆ ಹೋಗಿದ್ದಾರೆ. ಚಾಕುವಿನಿಂದ ಗುರುಸಿದ್ದಯ್ಯ ಹಾಗೂ ಸರೋಜಮ್ಮ ದಂಪತಿಯ ಕುತ್ತಿಗೆ ಇರಿದು ಕೊಂದು ಹಾಕಿದ್ದರು. ಬಳಿಕ ಸರೋಜಮ್ಮರ ಮೈಮೇಲಿದ್ದ ಚಿನ್ನಾಭರಣ ಹಾಗೂ ಮನೆಯಲ್ಲಿದ್ದ ನಗದು ದೋಚಿ ಪರಾರಿಯಾಗಿದ್ದರು.

ಆರೋಪಿಗಳ ಪತ್ತೆ ಕಾರ್ಯ ಹೇಗಿತ್ತು?

ಆರೋಪಿಗಳನ್ನು ಪತ್ತೆ ಹಚ್ಚಲು ಪ್ರೊಬೆಷನರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಿಥುನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ, ಡಿಸಿಆರ್ ಬಿ ಘಟಕದ ಪೊಲೀಸ್ ಉಪಾಧೀಕ್ಷಕ ಬಿ. ಎಸ್. ಬಸವರಾಜ್, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಲಿಂಗನಗೌಡ ನೆಗಳೂರು ನೇತೃತ್ವದ ತಂಡ ರಚಿಸಲಾಗಿತ್ತು.

ಎಲೇಬೇತೂರು ಗ್ರಾಮದ ಕುಮಾರನಾಯ್ಕನ ಮೇಲೆ ಪೊಲೀಸರಿಗೆ ಸಂಶಯ ಬರಲಾರಂಭಿಸಿತು. ಹತ್ಯೆಯಾದ ಬಳಿಕ ಆತನ ನಡವಳಿಕೆ, ಎಲ್ಲಿ ಹೋಗುತ್ತಿದ್ದ, ಸಾಲ ಪಡೆದಿದ್ದ ವಿಚಾರದ ಬಗ್ಗೆ ಮಾಹಿತಿ ಕಲೆ ಹಾಕಿದರು. ಆ ಬಳಿಕ ಆತನನ್ನು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ. ಇನ್ನು ಬಂಧಿತ ಆರೋಪಿಗಳಿಂದ 1,75,000 ರೂಪಾಯಿ ನಗದು, 188 ಗ್ರಾಂ ಬಂಗಾರದ ಆಭರಣಗಳು ಸೇರಿದಂತೆ ಒಟ್ಟು 9,27,000 ರೂಪಾಯಿ ಮೌಲ್ಯದ ಬಂಗಾರ, ನಗದು ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಸ್ವಲ್ಪ ಹಣ ಮತ್ತು ಬಂಗಾರ ವಶಪಡಿಸಿಕೊಳ್ಳಬೇಕಿದೆ. ಇನ್ನು ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಗುರುಸಿದ್ದಯ್ಯ ಹಾಗೂ ಸರೋಜಮ್ಮರ ಮೃತದೇಹಗಳನ್ನು ಮಣ್ಣು ಮಾಡಿದ ಬಳಿಕವೂ ಹೊರತೆಗೆಯಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಎಸ್ಪಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಸಾಕ್ಷ್ಯಾಧ್ಯಾರಕ್ಕಾಗಿ ಮೃತದೇಹಗಳನ್ನು ಹೊರ ತೆಗೆಯಲಾಗಿತ್ತು. ವಿಷ ಕುಡಿಸಿ ನಂತರ ಹತ್ಯೆ ಮಾಡಿದ್ದಾರೋ, ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಈ ನಿಟ್ಟಿನಲ್ಲಿ ಫೊರೆನ್ಸಿಕ್ ಲ್ಯಾಬ್‌ ವರದಿಗಾಗಿ ಕಾಯಲಾಗುತ್ತಿದೆ ಎಂದು ಹೇಳಿದ್ದಾರೆ.