ಬೆಂಗಳೂರು(Bengaluru): ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ಮಾಡಿರುವ ನಗರದ ಪೊಲೀಸರು 31 ಜನರನ್ನು ಬಂಧಿಸಿರುವ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಇಲ್ಲಿನ ಪಬ್ವೊಂದರಲ್ಲಿ ರೇವ್ ಪಾರ್ಟಿ ನಡೆಸುತ್ತಿರುವ ಖಚಿತ ಮಾಹಿತಿ ಅರಿತು ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ ಗುಳೇದ್ ಘಟನೆ ಕುರಿತು ಮಾಹಿತಿ ನೀಡಿದ್ದು, ಸುಮಾರು 51 ಜನರು ಮಧ್ಯರಾತ್ರಿ 12.30ರ ವೇಳೆಯಲ್ಲಿ ಡಿಜೆ ಹಾಕಿಕೊಂಡು ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಎಲ್ಲರನ್ನೂ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ 31 ಜನರು ಡ್ರಗ್ಸ್ ಸೇವನೆ ಮಾಡಿರುವುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳದಲ್ಲಿ ಎಂಡಿಎಂಎ, ಚರಸ್, ಗಾಂಜಾ ಸೇರಿ ಮೂರು ಲಕ್ಷ ಮೌಲ್ಯದ ಡ್ರಗ್ಸ್ ಸಿಕ್ಕಿದೆ. ಬಂಧಿತ 31 ಮಂದಿ ಆರೋಪಿಗಳ ಪೈಕಿ ಇಬ್ಬರು ಡ್ರಗ್ಸ್ ಪೆಡ್ಲರ್ಗಳಾಗಿದ್ದಾರೆ. ಪಾರ್ಟಿ ಆಯೋಜಕ ಹರಿಕೃಷ್ಣ, ಡಿಜೆ ಸೆಂಥಿಲ್ ಕುಮಾರ್ ಸೇರಿ 31 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.