ನವದೆಹಲಿ: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.
ಆದರೆ, ಈ ಕರೆನ್ಸಿ ನೋಟುಗಳು ಕಾನೂನಾತ್ಮಕವಾಗಿ ಸಿಂಧುವಾಗಿ ಮುಂದುವರಿಯಲಿವೆ. ಆರ್’ಬಿಐ ಶುಕ್ರವಾರ ಈ ಹೇಳಿಕೆ ನೀಡಿದೆ. 2,000 ರೂ ನೋಟು ಹೊಂದಿರುವವರು ಅದನ್ನು ಮರಳಿಸಲು ಸಮಯಾವಕಾಶ ಕೊಡಲಾಗುತ್ತದೆ. ಆರ್ ಬಿಐ ನೀಡಿರುವ ಮಾಹಿತಿ ಪ್ರಕಾರ 2023 ಸೆಪ್ಟಂಬರ್ 30ರೊಳಗೆ 2,000 ಮುಖಬೆಲೆಯ ನೋಟುಗಳನ್ನು ವಾಪಸ್ ಕೊಟ್ಟು ವಿನಿಮಯ ಮಾಡಿಕೊಳ್ಳಬಹುದು. ಮೇ 23ರಿಂದ ನೋಟು ವಿನಿಮಯಕ್ಕೆ ಅವಕಾಶ ಕೊಡಲಾಗುತ್ತದೆ.
“ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ” ಎಂದಿರುವ ಆರ್ ಬಿಐ, 2000 ರೂಪಾಯಿ ನೋಟ್ ಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಿದೆ ಮತ್ತು ಒಂದು ಬಾರಿಗೆ 20 ಸಾವಿರ ರೂಪಾಯಿವರೆಗೆ ವಿನಿಮಯ ಮಾಡಿಕೊಳ್ಳಲು ಅಥವಾ ಜಮೆ ಮಾಡಲು ಅವಕಾಶ ನೀಡಿದೆ.
ನವೆಂಬರ್ 8, 2016 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ 500 ಮತ್ತು 1,000 ರೂಪಾಯಿ ನೋಟ್ ಬ್ಯಾನ್ ಮಾಡುವುದಾಗಿ ಘೋಷಿಸಿದ್ದರು. ನೋಟು ಅಮಾನ್ಯೀಕರಣ ನೀತಿಯನ್ನು ಜಾರಿಗೆ ತರುವ ಮುಖ್ಯ ಕಾರಣ ಕಪ್ಪುಹಣಕ್ಕೆ ಕಡಿವಾಣ ಹಾಕುವುದು, ನಕಲಿ ನೋಟುಗಳನ್ನು ನಿರ್ಮೂಲನೆ ಮಾಡುವುದು ಮತ್ತು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಮೂಲಕ ನಗದು ರಹಿತ ಆರ್ಥಿಕತೆಯನ್ನು ಸೃಷ್ಟಿಸುವುದು ಯೋಜನೆಯ ಗುರಿಯಾಗಿತ್ತು.
ಹಳೆ ನೋಟುಗಳನ್ನು ಬದಲಿಸಲು ಆರ್ಬಿಐ ಹೊಸ 500 ರ ನೋಟು ಮತ್ತು 2,000 ರೂಪಾಯಿ ನೋಟುಗಳನ್ನು ಪರಿಚಯಿಸಿತು. ಪ್ರಸ್ತುತ, ಆರ್’ಬಿಐ ರೂ 2, ರೂ 5, ರೂ 10, ರೂ 20, ರೂ 50, ರೂ 100, ರೂ 200 ಮತ್ತು ರೂ 500 ಮತ್ತು ನೋಟುಗಳನ್ನು ಪೂರೈಸುತ್ತಿದೆ. ಆದರೆ ಆರ್ ಬಿಐ 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ನಾಲ್ಕು ವರ್ಷಗಳ ಹಿಂದೆಯೇ ನಿಲ್ಲಿಸಿದೆ.