ಮನೆ ಕ್ರೀಡೆ ಆರ್ ಸಿಬಿ ಈ ಬಾರಿ ಪ್ಲೇ ಆಫ್ಸ್ ತಲುಪುವುದಿಲ್ಲ: ಆಕಾಶ್ ಚೋಪ್ರಾ ಭವಿಷ್ಯ

ಆರ್ ಸಿಬಿ ಈ ಬಾರಿ ಪ್ಲೇ ಆಫ್ಸ್ ತಲುಪುವುದಿಲ್ಲ: ಆಕಾಶ್ ಚೋಪ್ರಾ ಭವಿಷ್ಯ

0

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಅಗ್ರ 3ರಲ್ಲಿ ಗುರುತಿಸಿಕೊಳ್ಳುವುದಿಲ್ಲ ಎಂದು ಮಾಜಿ ಕ್ರಿಕೆಕೆಟಿಗ ಹಾಗೂ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.

ಐಪಿಎಲ್ 2022 ಟೂರ್ನಿಯಲ್ಲಿ ಪ್ಲೇ ಆಫ್ಸ್ ತಲುಪಿದ್ದ ಆರ್ಸಿಬಿ, ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ಗೆ ಸೋಲುಣಿಸಿ ನಂತರ ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ನಿರಾಶೆ ಅನುಭವಿಸಿತ್ತು. ಪರಿಣಾಮ ಲೀಗ್ ನ 3ನೇ ಅತ್ಯುತ್ತಮ ತಂಡ ಎನಿಸಿಕೊಂಡಿತು. ಆದರೆ, ಈ ಬಾರಿ ಆರ್ ಸಿಬಿಯಿಂದ ಆ ಮಾದರಿಯ ಪ್ರದರ್ಶನ ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಆವೃತ್ತಿಯಿಂದ ಸ್ಪರ್ಧೆಯಲ್ಲಿದ್ದ ಟ್ರೋಫಿ ಗೆಲ್ಲದೇ ಉಳಿದಿರುವ ಮೂರು ತಂಡಗಳ ಪೈಕಿ ಒಂದಾದ ಆರ್ ಸಿಬಿ ಮೂರು ಬಾರಿ ರನ್ನರ್ಸ್ ಅಪ್ ಸ್ಥಾನ ಪಡೆದಿದೆ. ಐಪಿಎಲ್ 2023 ಟೂರ್ನಿಯಲ್ಲಿ ಏಪ್ರಿಲ್ 2ರಂದು ತನ್ನ ಮೊದಲ ಪಂದ್ಯವನ್ನಾಡಲಿದ್ದು, ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ.

ಈ ಬಗ್ಗೆ ಮಾತನಾಡಿರುವ ಆಕಾಶ್, ಈ ಬಾರಿ ಆರ್ಸಿಬಿ ಪ್ಲೇ-ಆಫ್ಸ್ ಹಂತಕ್ಕೇರಲು ಕೊನೇ ಸ್ಥಾನಕ್ಕಾಗಿ ಶತಾಯಗತಾಯ ಹೋರಾಟ ನಡೆಸಲಿದೆ ಎಂದಿದ್ದಾರೆ. ತಾಯ್ನಾಡಿನಲ್ಲಿ ಪಂದ್ಯಗಳನ್ನು ಆಡುತ್ತಿರುವುದು ಆರ್ ಸಿಬಿಗೆ ಅಡಚಣೆಯಾಗಲಿದೆ ಎಂದು 45 ವರ್ಷದ ಮಾಜಿ ಕ್ರಿಕೆಟಿಗ ಅಭಿಪ್ರಾಯ ಪಟ್ಟಿದ್ದಾರೆ. ಟೂರ್ನಿಯಲ್ಲಿ ಆರ್ಸಿಬಿ ಯಶಸ್ಸು ಕಾಣಬೇಕಾದರೆ ತಂಡದ ಬೌಲಿಂಗ್ ಪ್ರದರ್ಶನ ಮಹತ್ವದ್ದಾಗಲಿದೆ ಎಂದಿದ್ದಾರೆ.

“ಆರ್ಸಿಬಿ ತಂಡದ ಬಲ ಗಮನಿಸಿದರೆ ಸುಲಭವಾಗಿ ಪ್ಲೇ-ಆಫ್ಸ್ ತಲುಪಬೇಕು. ಆದರೆ, ಆರ್ಸಿಬಿ ತಂಡದಲ್ಲಿ ಸಮಸ್ಯೆಗಳಿವೆ. ಈ ಬಾರಿ ತಂಡ ತವರಿನಂಗಣದಲ್ಲಿ ಪಂದ್ಯಗಳನ್ನು ಆಡಲಿದೆ. ತಟಸ್ಥ ಅಂಗಣದಲ್ಲಿ ಪಂದ್ಯ ನಡೆದಾಗ ಆರ್ಸಿಬಿ ಅತ್ಯಂತ ಅಪಾಯಕಾರಿ ತಂಡ. ಈ ಬಾರಿ ಆರ್ ಸಿಬಿ 4ರಿಂದ 6ನೇ ಸ್ಥಾನದಲ್ಲಿ ಅಭಿಯಾನ ಕೊನೆಗೊಳಿಸಲಿದೆ. ಅಗ್ರ 3ರಲ್ಲಿ ಕಾಣಿಸಿಕೊಳ್ಳಲು ಖಂಡಿತಾ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಆರ್ ಸಿಬಿ ತಂಡದ ಭವಿಷ್ಯವನ್ನು ತಂಡದ ಬೌಲಿಂಗ್ ವಿಭಾಗ ನಿರ್ಧರಿಸಲಿದೆ. ಏಕೆಂದರೆ ತಂಡದ ಬ್ಯಾಟಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಆದರೆ, ಬೌಲಿಂಗ್ ನಲ್ಲಿ ಬಲಿಷ್ಠ ಪ್ರದರ್ಶನ ಬರಬೇಕು. ತಂಡದಲ್ಲಿ ವಾನಿಂದು ಹಸರಂಗ ಅವರಂತಹ ಗುಣಮಟ್ಟದ ಬೌಲರ್ ಇದ್ದಾರೆ. ಜಾಶ್ ಹೇಝಲ್ವುಡ್ ಫಿಟ್ನೆಸ್ ಸಮಸ್ಯೆ ಆರ್ ಸಿಬಿಗೆ ಬಹುದೊಡ್ಡ ಹಿನ್ನಡೆ ಎಂದಿದ್ದಾರೆ.