ಮನೆ ರಾಜ್ಯ ಚಾಮರಾಜನಗರದ ಆಕ್ಸಿಜನ್​ ದುರಂತದ ಬಗ್ಗೆ ಮರು ತನಿಖೆ: ದಿನೇಶ್​ ಗುಂಡೂರಾವ್

ಚಾಮರಾಜನಗರದ ಆಕ್ಸಿಜನ್​ ದುರಂತದ ಬಗ್ಗೆ ಮರು ತನಿಖೆ: ದಿನೇಶ್​ ಗುಂಡೂರಾವ್

0

ಬೆಂಗಳೂರು: ಚಾಮರಾಜನಗರದ ಆಕ್ಸಿಜನ್​ ದುರಂತದ ಬಗ್ಗೆ ಮರು ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Join Our Whatsapp Group

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಇದ್ದ ಸರ್ಕಾರ ತನಿಖೆಗೆ ಕೆಲವರನ್ನು ನೇಮಕ ಮಾಡಿತ್ತು. ಆದರೆ ಆಕ್ಸಿಜನ್​ ದುರಂತದ ಬಗ್ಗೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹೊಸ ಸರ್ಕಾರ ಬಂದಿದ್ದರಿಂದ ಮರು ತನಿಖೆಗೆ ನಿರ್ಧಾರ ಮಾಡಿದ್ದೇವೆ. ಇದಕ್ಕಾಗಿ ಡಿಪಿಆರ್ ಕೂಡ ರೆಡಿಯಾಗುತ್ತಿದೆ ಎಂದರು.

ಆಕ್ಸಿಜನ್ ದುರ್ಘಟನೆ ಸಂಬಂಧ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕೋವಿಡ್ ನಿರ್ವಹಣಾ ಸಮಿತಿಯು ಹೈಕೋರ್ಟ್‌ ಗೆ ಈಗಾಗಲೇ ವರದಿ ಸಲ್ಲಿಸಿದ್ದು, 2021ರ ಮೇ 2-3 ರ ರಾತ್ರಿ 36 ಒಳರೋಗಿಗಳ ಸಾವಿಗೆ ಆಮ್ಲಜನಕದ ಲಭ್ಯತೆ ಕೊರತೆಯೇ ಕಾರಣ ಎಂದು ಉಲ್ಲೇಖಿಸಿದೆ.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 36 ರೋಗಿಗಳು ಮೃತಪಟ್ಟಿದ್ದಕ್ಕೆ ಸಂಬಂಧಿಸಿದ ಆರೋಪ ಮತ್ತು ಇತರ ಹಗರಣಗಳ ಬಗ್ಗೆ ತನಿಖೆ ನಡೆಸುವಂತೆ ಇಲಾಖೆಯ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇತ್ತೀಚೆಗಷ್ಟೇ ಸೂಚಿಸಿದ್ದರು. ಸಾವಿಗೆ ಯಾರು ಹೊಣೆ ಮತ್ತು ತಪ್ಪಿತಸ್ಥರು ಯಾರು ಎಂಬುದರ ಪತ್ತೆಗೆ ಯಾವುದೇ ತನಿಖೆ ನಡೆದಿಲ್ಲ. ಹೀಗಾಗಿ ತಕ್ಷಣ ತನಿಖೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದರು.

ಘಟನೆಯಲ್ಲಿ ಮೃತಪಟ್ಟ ರೋಗಿಗಳ ಕುಟುಂಬಸ್ಥರು ಜೂನ್ 5 ರಂದು ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಸಮಾಲೋಚನೆ ಸಭೆ ನಡೆಸಿದ್ದು, ಬಿಜೆಪಿ ಸರ್ಕಾರ ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಲಿಲ್ಲ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೊಟ್ಟಿಲ್ಲ ಎಂದು ಆರೋಪಿಸಿದ್ದರು. ಅಲ್ಲದೆ, ಪ್ರಕರಣದ ಸೂಕ್ತ ತನಿಖೆ ನಡೆಸಲು ಕಾಂಗ್ರೆಸ್ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೇ ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡುವ ಭರವಸೆ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಹೀಗಾಗಿ ಸದ್ಯ ಪರಿಹಾರ ಹಣಕ್ಕಿಂತ ನೌಕರಿ ಕೊಡಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಹಿಂದಿನ ಲೇಖನಹೊಸಬರ ಸಿನಿಮಾ ‘ಗದಾಯುದ್ಧ’ ಬಿಡುಗಡೆ
ಮುಂದಿನ ಲೇಖನಜೂ.10ರಂದು ಏಕದಿನ ವಿಶ್ವಕಪ್‌ ಕ್ರೀಡಾಕೂಟದ ವೇಳಾಪಟ್ಟಿ ಪ್ರಕಟ