ನವದೆಹಲಿ(New Delhi)-ತೆರಿಗೆ ವಿಧಿಸುವ ವಿಚಾರದಲ್ಲಿ ಶಾಸನ ರೂಪಿಸುವ ಸಮಾನ ಅಧಿಕಾರವು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕಿದೆ. ಹೀಗಾಗಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಮಾಡುವ ಶಿಫಾರಸುಗಳ ಪಾಲನೆ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್(Supreme Court) ಹೇಳಿದೆ.
ಜಿಎಸ್‌ಟಿ ಮಂಡಳಿಯ ಶಿಫಾರಸುಗಳು ಮನವೊಲಿಸುವಂತೆ ಇರಬೇಕು ಎಂಬುದು ಸಂಸತ್ತಿನ ನಿಲುವಾಗಿತ್ತು ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಮಹತ್ವದ ತೀರ್ಪಿನಲ್ಲಿ ಹೇಳಿದೆ.
ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ನಡೆಸುವ ಮಾತುಕತೆಗಳನ್ನು ಆಧರಿಸಿ ಜಿಎಸ್‌ಟಿ ಮಂಡಳಿ ಶಿಫಾರಸು ಮಾಡುತ್ತದೆ. ಅವು ಶಿಫಾರಸಿನ ಸ್ವರೂಪವನ್ನು ಮಾತ್ರ ಹೊಂದಿವೆ. ಆ ಶಿಫಾರಸುಗಳು,ಪಾಲಿಸಲೇಬೇಕಾದ ಆಜ್ಞೆ ಎಂಬಂತೆ ಕಾಣುವುದು ಹಣಕಾಸಿನ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಜಿಎಸ್‌ಟಿ ವಿಚಾರವಾಗಿ ಶಾಸನ ತರುವ ಸಮಾನ ಅಧಿಕಾರವು ಈ ವ್ಯವಸ್ಥೆಯ ಅಡಿಯಲ್ಲಿ ರಾಜ್ಯಗಳಿಗೂ ಕೇಂದ್ರಕ್ಕೂ ಇದೆ ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ವಿಕ್ರಮ್ ನಾಥ್ ಅವರೂ ಈ ಪೀಠದಲ್ಲಿದ್ದರು.
ಸಂವಿಧಾನ ತಿದ್ದುಪಡಿ ಕಾಯ್ದೆ – 2016ರ ಮೂಲಕ ಸೇರಿಸಲಾದ ಸಂವಿಧಾನದ 246(ಎ) ವಿಧಿಯು, ಜಿಎಸ್‌ಟಿ ವಿಚಾರವಾಗಿ ಕಾನೂನು ರೂಪಿಸುವ ಅಧಿಕಾರವನ್ನು ಸಂಸತ್ತಿಗೂ ರಾಜ್ಯಗಳ ಶಾಸನಸಭೆಗಳಿಗೂ ಒಟ್ಟೊಟ್ಟಿಗೇ ನೀಡಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
153 ಪುಟಗಳ ತೀರ್ಪನ್ನು ನ್ಯಾಯಪೀಠದ ಪರವಾಗಿ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಬರೆದಿದ್ದಾರೆ. ಜಿಎಸ್‌ಟಿ ಮಂಡಳಿಯು ತೀರ್ಮಾನ ಕೈಗೊಳ್ಳುವ ಪ್ರಾಧಿಕಾರ ಆಗಿದ್ದಿದ್ದರೆ, ಅದರ ಶಿಫಾರಸುಗಳು ಶಾಸನಗಳಾಗಬೇಕು ಎಂಬುದಾಗಿದ್ದರೆ, ಅಂತಹ ಅಂಶವು ಸಂವಿಧಾನದ 246(ಎ), 279(ಎ) ವಿಧಿಗಳಲ್ಲಿ ಅಡಕವಾಗಿರುತ್ತಿತ್ತು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಬರೆದಿದ್ದಾರೆ.
ಜಿಎಸ್‌ಟಿ ಕುರಿತು ಸುಪ್ರೀಂ ಕೋರ್ಟ್ ನ ಈ ತೀರ್ಪನ್ನು ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಸ್ವಾಗತಿಸಿವೆ. ಸುಪ್ರೀಂ ಕೋರ್ಟ್ ತೀರ್ಪು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಹಕ್ಕನ್ನು ಎತ್ತಿಹಿಡಿದಿದೆ ಎಂದು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಗುರುವಾರ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯಗಳು ಮತ್ತು ಜನರ ಒಕ್ಕೂಟ ಹಕ್ಕುಗಳನ್ನು ಈ ತೀರ್ಪು ಎತ್ತಿ ಹಿಡಿದಿದೆ ಎಂದು ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಹೇಳಿದ್ದಾರೆ.