ಬೆಂಗಳೂರು : ಮಾರುಕಟ್ಟೆಯಲ್ಲಿ ಕೆಂಪು ಸುಂದರಿ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗಿದೆ. ಇದರಿಂದ ರೈತರು ಖುಷ್ ಆಗಿದ್ದರೇ, ಗ್ರಾಹಕರಿಗೆ ಜೇಬಿಗೆ ಕತ್ತರಿ ಬೀಳುತ್ತೆ ಅನ್ನೋದು ಚಿಂತೆಯಾಗಿದೆ. ಕಳೆದ ತಿಂಗಳು 10-20 ರೂ. ಗಳಷ್ಟಿದ್ದ ಕೆ.ಜಿ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿದೆ.
ಕಳೆದ 8-10 ದಿನಗಳಲ್ಲಿ ಟೊಮೆಟೊ ಬೆಲೆ ಏರಿಕೆ ಕಂಡಿದ್ದು, 80 ರಿಂದ 90 ರೂ. ಅಂಚಿಗೆ ತಲುಪಿದೆ. ಇದು ಶೀಘ್ರವೇ ಶತಕ ಮುಟ್ಟಲಿದೆ ಎಂಬ ಮಾತು ತರಕಾರಿ ಮಾರಾಟಗಾರರಿಂದ ಕೇಳಿ ಬರುತ್ತಿದೆ.
ಎರಡು ತಿಂಗಳ ಹಿಂದೆ ಟೊಮೆಟೊ ಬೆಲೆ ಕುಸಿತ ಉಂಟಾಗಿ ರಸ್ತೆಗೆ ಹಾಕಿದ್ದ ಬೆಳೆಗಾರರಿಗೆ ಎರಡು ತಿಂಗಳ ಅಂತರದಲ್ಲಿ ಲಾಭ ಹುಡುಕಿಕೊಂಡು ಬರುತ್ತಿದೆ. ಮನೆಯಲ್ಲಿನ ಅಡುಗೆಯಲ್ಲಿ ಟೊಮೆಟೊ ತನ್ನದೆಯಾದ ಸ್ಥಾನ ಪಡೆದು, ಮುಖ್ಯ ಸಾಮಗ್ರಿಯಾಗಿದೆ. ದಿಢೀರ್ ದರ ಏರಿಕೆಯಿಂದ ಕೆ.ಜಿ. ತೆಗೆದುಕೊಂಡು ಹೋಗುವವರು ಅರ್ಧ ಕೆ.ಜಿ.ಗೆ ಇಳಿಕೆ ಕಂಡಿದ್ದಾರೆ.
ಬೆಂಗಳೂರು ನಗರದಲ್ಲಿ ಕಳೆದ 8-10 ದಿನಗಳಿಂದ ಟೊಮೆಟೊ ಬೆಲೆ ಏರಿಕೆ ಆಗಿದೆ. ಹಾಪ್ ಕಾಮ್ಸ್‌ಗಳಲ್ಲಿ ಉತ್ತಮ ದರ್ಜೆಯ ಟೊಮೆಟೊ ಪ್ರತಿ ಕೆಜಿಗೆ 80 ರೂ. ತಲುಪಿದ್ದರೆ, ತಳ್ಳು ಗಾಡಿ ವ್ಯಾಪಾರಿಗಳು 90 ರೂ.ಗೆ ಮಾರಾಟ ಮಾಡ್ತಿದ್ದಾರೆ.
ಅಕಾಲಿಕ ಮಳೆಯಿಂದಾಗಿ ಇಳುವರಿ ಕಡಿಕೆಯಾಗಿದೆ. ಇದರೊಂದಿಗೆ ಬೆಂಗಳೂರಿಗೆ ಸರಬರಾಜಾಗುತ್ತಿದ್ದ ಟೊಮೆಟೊ ಪ್ರಮಾಣದಲ್ಲೂ ಇಳಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ನಾಸಿಕ್ ನಿಂದ ಪೂರೈಕೆ ಆಗುತ್ತಿದ್ದ ಟೊಮೆಟೊ ಇಳಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಆಗಿದೆ.
ಟೊಮೆಟೋ ಬೆಲೆ ಏರಿಕೆಗೆ ಇತರ ಕಾರಣವೇನು? – ಬೇಡಿಕೆಗೆ ತಕ್ಕಂತೆ ಟೊಮೆಟೊ ಪೂರೈಕೆಯಾಗದೆ ಇರುವುದು. ಅಕಾಲಿಕ ಮಳೆಯಿಂದಾಗಿ ಟೊಮೆಟೊ ಬೆಳೆಯಲ್ಲಿ ಏರುಪೇರು, ಪೂರೈಕೆಯಲ್ಲಿ ಕುಠಿತ, ಹಲವೆಡೆ ಬೆಳೆ ರೋಗದಿಂದ ಕಡಿಮೆಯಾದ ಇಳುವರಿ, ಅಗತ್ಯಕ್ಕೆ ತಕ್ಕಷ್ಟು ದಾಸ್ತಾನು ಇಲ್ಲದಿರುವುದು.















