ಮನೆ ಸುದ್ದಿ ಜಾಲ ಹಿಜಾಬ್ ತೆಗೆಯಲು  ನಿರಾಕರಣೆ: ಪರೀಕ್ಷೆ ಬರೆಯದೇ ಮನೆಗೆ ತೆರಳಿದ ವಿದ್ಯಾರ್ಥಿಗಳು

ಹಿಜಾಬ್ ತೆಗೆಯಲು  ನಿರಾಕರಣೆ: ಪರೀಕ್ಷೆ ಬರೆಯದೇ ಮನೆಗೆ ತೆರಳಿದ ವಿದ್ಯಾರ್ಥಿಗಳು

0

ಉಡುಪಿ: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಿ ಹೈಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ಬುಧವಾರ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿದ ಕಾರಣಕ್ಕೆ ಒಂಬತ್ತು ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ವಾಪಸ್ ಮನೆಗೆ ತೆರಳಿದ್ದಾರೆ.

ಬೆಳಿಗ್ಗೆ ಕಾಲೇಜಿಗೆ ಹಿಜಾಬ್ ಹಾಕಿಕೊಂಡು ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದು ತರಗತಿಗೆ ಬರುವಂತೆ ಪ್ರಾಂಶುಪಾಲರು ಸೂಚನೆ ನೀಡಿದರು.

ಆಗ, ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿ ಪ್ರವೇಶಿಸಿದರೆ, ಉಳಿದವರು ನಿರಾಕರಿಸಿ ವಾಪಸ್ ತೆರಳಿದರು.

ಹೈಕೋರ್ಟ್ ಆದೇಶದಂತೆ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ವಿದ್ಯಾರ್ಥಿನಿಯರಿಗೆ ತಿಳಿ ಹೇಳಲಾಯಿತು. ಆದರೆ, ಒಪ್ಪದ ಕಾರಣ ಪ್ರವೇಶ ನಿರಾಕರಿಸಲಾಯಿತು ಎಂದು ಪ್ರಾಂಶುಪಾಲ ಎಂದು ಪ್ರಾಂಶುಪಾಲ ಡಾ.ಅನಿಲ್ ಕುಮಾರ್ ತಿಳಿಸಿದರು.’

ಹಿಜಾಬ್ ವಿವಾದ ಆರಂಭವಾದ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಕಾಲೇಜು ಆವಣರದವರೆಗೂ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ತರಗತಿ ಪ್ರವೇಶಿಸುವಾಗ ಹಿಜಾಬ್ ಬಿಚ್ಚಿಟ್ಟು ತೆರಳಿದರು.

ಹಿಜಾಬ್‌ಗಾಗಿ ಕಾನೂನು ಹೋರಾಟ ನಡೆಸುತ್ತಿರುವ 6 ವಿದ್ಯಾರ್ಥಿನಿಯರು ಸೇರಿ 40 ಮುಸ್ಲಿಂ ವಿದ್ಯಾರ್ಥಿನಿಯರು ಗೈರಾಗಿದ್ದರು.