ಮೈಸೂರು : ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಹಿಂದುಳಿದ ತಾಲ್ಲೂಕುಗಳ ಜನರ ತಲಾ ಆದಾಯ ಹೆಚ್ಚಳವಾಗಬೇಕು. ಈ ನಿಟ್ಟಿನಲ್ಲಿ ಸೌಲಭ್ಯಗಳನ್ನು ಕಲ್ಪಿಸಿ ಯೋಜನೆಗಳನ್ನು ರೂಪಿಸಬೇಕು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷರು ಹಾಗೂ ಆರ್ಥಿಕ ತಜ್ಞರಾದ ಪ್ರೊ ಎಂ. ಗೋವಿಂದರಾವ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಿಭಾಗ ಮಟ್ಟದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಾದೇಶಿಕ ಅಸಮತೋಲನ ಸಮಿತಿ ೨೦೨೪ ರ ಸೆಪ್ಟೆಂಬರ್ ನಿಂದ ಕೆಲಸ ಮಾಡಲು ಪ್ರಾರಂಭಿಸಿದೆ. ನಂಜುಂಡಪ್ಪ ವರದಿಯಲ್ಲಿ ೩೫ ಸೂಚ್ಯಂಕ ಗಳನ್ನು ಅಧ್ಯಯನ ಮಾಡಿ ವರದಿ ನೀಡಿತ್ತು. ವರದಿಯಂತೆ ೩೧ ಸಾವಿರ ಕೋಟಿ ಹಣ ಖರ್ಚು ಮಾಡಲಾಗಿದೆ ಆದರೂ ಹಲವು ಕ್ಷೇತ್ರಗಳಲ್ಲಿ ಅಭಿವೃದ್ದಿ ಆಗಿಲ್ಲ. ಈ ಬಗ್ಗೆ ಸಮಿತಿಯಿಂದ ಹಲವು ಆಯಾಮಗಳಲ್ಲಿ ಅಧ್ಯಯನ ನಡೆಸಲಾಗುವುದು ಎಂದರು.
ಅನುದಾನ ಖರ್ಚು ಮಾಡಿದರೆ ಅಭಿವೃದ್ದಿ ಆಗುತ್ತದೆ ಎಂಬುದು ಸಾಧ್ಯವಿಲ್ಲ. ಅಲ್ಲಿನ ಜನರ ತಲಾ ಆದಾಯ ಹೆಚ್ಚಾಗಬೇಕು. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ತಲಾ ಆದಾಯದಲ್ಲಿ ವ್ಯತ್ಯಾಸ ಇವೆ. ಉತ್ತರ ಕರ್ನಾಟಕ ಕಡಿಮೆ ತಲಾ ಆದಾಯ ಹೊಂದಿವೆ.
ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಕಾರ್ಖಾನೆಗಳು ಸ್ಥಾಪನೆ ಆಗಬೇಕು. ಜನರಿಗೆ ಉದ್ಯೋಗಾವಕಾಶಗಳು ದೊರೆಯುವಂತೆ ಯೋಜನೆಗಳನ್ನು ರೂಪಿಸಬೇಕು ಎಂದರು. ಹೆಚ್.ಡಿ ಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅನಿಲ್ ಕುಮಾರ್ ಸಿ., ಅವರು ಮಾತನಾಡಿ, ಹೆಚ್.ಡಿ. ಕೋಟೆ ತಾಲ್ಲೂಕು ಹಾಗೂ ಸರಗೂರು ತಾಲ್ಲೂಕುಗಳು ಹಿಂದುಳಿದಿವೆ. ನಮ್ಮ ತಾಲ್ಲೂಕು ವಿಸ್ತೀರ್ಣದಲ್ಲಿ ದೊಡ್ಡದು ಇದೆ. ವಿಸ್ತೀರ್ಣದ ಆದರದ ಮೇಲೆ ಅನುದಾನವನ್ನು ನೀಡಬೇಕು. ನಮ್ಮ ತಾಲ್ಲೂಕಿನಲ್ಲಿ ೩೦೦ ಹಳ್ಳಿಗಳು ಇವೆ. ಆದರೆ ನಮ್ಮ ತಾಲ್ಲೂಕಿಗೆ ಕೇವಲ ೭೦ ಕೆಎಸ್‌ಆರ್‌ಟಿಸಿ ಬಸ್ ಸೇವೆ ಇದ್ದು, ಎಲ್ಲವೂ ಹಳೆಯ ಬಸ್‌ಗಳು, ನಮ್ಮ ತಾಲ್ಲೂಕಿನ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಹಳ್ಳಿಗಳಿಗೆ ಸಂಪರ್ಕ ರಸ್ತೆಗಳು ಸಮರ್ಪಕವಾಗಿ ಇಲ್ಲ. ತಾಲ್ಲೂಕಿನಲ್ಲಿ ಹೆಚ್ಚಿನ ಹಾಡಿ ಜನರು ವಾಸ ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ತಾಲ್ಲೂಕಿನ ಅಭಿವೃದ್ಧಿ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು ಎಂದು ಸಮಿತಿಗೆ ಮಾಹಿತಿ ನೀಡಿದರು.
ಪ್ರೊ ಸೂರ್ಯ ನಾರಾಯಣ್ ಅವರು ಮಾತನಾಡಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಈ ಭಾಗದಲ್ಲಿ ಅಭಿವೃದ್ದಿ ಹೊಂದಿರುವ ಜಿಲ್ಲೆಗಳು ಆದರೂ ಉಡುಪಿ ಜಿಲ್ಲೆಯ ಬ್ರಹ್ಮಾವರದ ಹಲವು ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳು ಇಲ್ಲ. ಜಿಲ್ಲೆಗಳ ಅಭಿವೃದ್ಧಿಗೆ ಉತ್ತಮ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.
ಪ್ರಾದೇಶಿಕ ಅಸಮತೋಲನ ಸಮಿತಿಯ ನಿರ್ದೇಶಕರಾದ ಚಂದ್ರಶೇಖರಯ್ಯ ಅವರು ಮಾತನಾಡಿ, ೧೯೫೬ ರಲ್ಲಿ ಕರ್ನಾಟಕ ಏಕೀಕರಣ ಆಯಿತು. ಮೈಸೂರು ಭಾಗ ಅಭಿವೃದ್ದಿ ಆಗಿತ್ತು. ಆದರೆ ಹೈದರಾಬಾದ್ ಪ್ರಾಂತ್ಯ ಅಭಿವೃದ್ದಿ ಆಗಿರಲಿಲ್ಲ. ೨೦೦೦ ರಲ್ಲಿ ಪ್ರೊ ನಂಜುಂಡಯ್ಯ ಅವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮತೋಲನ ಸಮಿತಿ ರಚನೆಯನ್ನು ಕರ್ನಾಟಕ ಸರ್ಕಾರ ಮಾಡಿತು. ಈ ಸಮಿತಿಯು ವರದಿಯನ್ನು ಸರಕಾರಕ್ಕೆ ನೀಡಿತು. ಅಂದಿನ ೧೭೫ ತಾಲ್ಲೂಕುಗಳಲ್ಲಿ ೧೧೩ ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳು ಎಂದು ವರದಿ ನೀಡಿತು. ವರದಿ ಪ್ರಕಾರ ಸರ್ಕಾರ ೩೧ ಸಾವಿರ ಕೋಟಿ ರೂ ಗಳನ್ನು ಹಿಂದುಳಿದ ತಾಲ್ಲೂಕುಗಳು ಅಭಿವದ್ಧಿಗೆ ಬಳಸಬೇಕು. ಶೇಕಡಾ ೬೦% ಉತ್ತರ ಕರ್ನಾಟಕಕ್ಕೆ ಹಾಗೂ ೪೦% ಅನುದಾನವನ್ನು ದಕ್ಷಿಣ ಕರ್ನಾಟಕಕ್ಕೆ ಬಳಸಬೇಕು. ಎಂದು ವರದಿ ನೀಡಿತ್ತು ಎಂದರು.
ಸಭೆಯಲ್ಲಿ ಉದ್ಯಮಿಗಳು ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳು ಪ್ರತಿನಿಧಿಗಳು ಹಾಗೂ ಮೈಸೂರು ವಿಭಾಗದ ಜಿಲ್ಲೆಗಳ ಅಧಿಕಾರಿಗಳು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಸಭೆಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾದೇಶಿಕ ಸಮತೋಲನ ಸಮಿತಿಯ ಸದಸ್ಯರಾದ ಸೂರ್ಯ ನಾರಾಯಣ, ಡಾ. ಎಸ್.ಟಿ. ಬಾಗಲಕೋಟಿ, ಯೋಜನೆ ಇಲಾಖೆಯ ಯೋಜನೆ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಡಾ. ವಿಶಾಲ್ ಆರ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.














