ಮನೆ ಕಾನೂನು ಗಣರಾಜ್ಯೋತ್ಸವ ದಿನದಂದು ಪ್ರಾದೇಶಿಕ ಭಾಷೆಗಳಲ್ಲಿ 1,091 ಸುಪ್ರೀಂ ಕೋರ್ಟ್ ತೀರ್ಪುಗಳ ಬಿಡುಗಡೆ: ಸಿಜೆಐ

ಗಣರಾಜ್ಯೋತ್ಸವ ದಿನದಂದು ಪ್ರಾದೇಶಿಕ ಭಾಷೆಗಳಲ್ಲಿ 1,091 ಸುಪ್ರೀಂ ಕೋರ್ಟ್ ತೀರ್ಪುಗಳ ಬಿಡುಗಡೆ: ಸಿಜೆಐ

0

ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು ಅದರ ಮೊದಲ ಹೆಜ್ಜೆಯಾಗಿ, ಗಣರಾಜ್ಯೋತ್ಸವ ದಿನವಾದ ನಾಳೆ ಒಡಿಯಾ, ಗಾರೋ ಮತ್ತಿತರ ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್’ನ1,091 ತೀರ್ಪುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಬುಧವಾರ ಹೇಳಿದ್ದಾರೆ. 

ಸಿಜೆಐ ಚಂದ್ರಚೂಡ್ ಅವರು ಇಂದು ಬೆಳಿಗ್ಗೆ ಮುಕ್ತ ನ್ಯಾಯಾಲಯದಲ್ಲಿ ಈ ವಿಚಾರವನ್ನು ವಕೀಲರಿಗೆ ತಿಳಿಸಿದರು.

“ಇ-ಎಸ್’ಸಿಆರ್ ಮತ್ತು ಲಭ್ಯವಿರುವ 34,000 ತೀರ್ಪುಗಳ ಹೊರತಾಗಿ ನಾನು ಹೇಳಬೇಕಾದ ಕೆಲ ವರ್ತಮಾನಗಳಿವೆ. ನಮ್ಮಲ್ಲಿ ಈಗ ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್’ನ ಹಲವಾರು ತೀರ್ಪುಗಳು ಸಿದ್ಧ ಇವೆ. ಅವುಗಳನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು” ಎಂದು ಅವರು ಹೇಳಿದರು.

ತೀರ್ಪುಗಳನ್ನು ಸ್ಥಳೀಯ ಭಾಷೆಗಳಲ್ಲಿ ದೊರೆಯುವಂತೆ ಮಾಡುವ ಯೋಜನೆಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. “ವಕೀಲ ವರ್ಗ ತಾವು ಬಳಸುವ ಯಾವುದೇ ಭಾಷೆಯಲ್ಲಿ ಇವುಗಳನ್ನು ಉಪಯೋಗಿಸಿಕೊಳ್ಳಬೇಕೆಂಬುದು ನಮ್ಮ ಉದ್ದೇಶ. ತೀರ್ಪುಗಳು ಒಡಿಯಾ, ಗಾರೋ (ಸೈನೋ- ಟಿಬೆಟಿಯನ್ ಭಾಷೆ) ಮತ್ತಿತರ ಪ್ರಾದೇಶಿಕ ನುಡಿಗಳಲ್ಲಿ ಲಭ್ಯವಾಗಲಿವೆ” ಎಂದು ಅವರು ಹೇಳಿದರು.

ನಿನ್ನೆ (ಮಂಗಳವಾರ) ದೆಹಲಿ ಹೈಕೋರ್ಟ್ ಆಯೋಜಿಸಿದ್ದ ಆನ್ಲೈನ್ ಇ-ಇನ್ಸ್ಪೆಕ್ಷನ್ ತಂತ್ರಾಂಶ ಉದ್ಘಾಟನಾ ಸಮಾರಂಭದಲ್ಲಿ ಅವರು ಯೋಜನೆಯ ಮೊದಲ ಹಂತವಾಗಿ ತೀರ್ಪುಗಳನ್ನು ಹಿಂದಿ, ತಮಿಳು, ಗುಜರಾತಿ ಹಾಗೂ ಒಡಿಯಾಗೆ ಅನುವಾದಿಸಲಾಗುತ್ತದೆ ಎಂದಿದ್ದರು.

ಭಾಷಾಂತರ ಕಾರ್ಯಕ್ಕಾಗಿ ನ್ಯಾಯಮೂರ್ತಿ ಎ ಎಸ್ ಓಕಾ ಅವರ ನೇತೃತ್ವದ ಸಮಿತಿ ರಚಿಸಲಾಗಿದ್ದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, ನ್ಯಾಷನಲ್ ಇನ್ಫರ್ಮಾಟಿಕ್ಸ್ ಸೆಂಟರ್’ನ ಶರ್ಮಿಷ್ಠಾ, ಐಐಟಿ ದೆಹಲಿ ಮಿತೇಶ್ ಕಪ್ರಾ, ಏಕ್ ಸ್ಟೆಪ್ ಪ್ರತಿಷ್ಠಾನದ ವಿವೇಕ್ ರಾಘವನ್, ಅಗಾಮಿ ಸಂಸ್ಥೆಯ ಸುಪ್ರಿಯಾ ಶಂಕರನ್ ಅವರು ಸಮಿತಿಯ ಸದಸ್ಯರಾಗಿರುತ್ತಾರೆ ಎಂದು ಸಿಜೆಐ ತಿಳಿಸಿದ್ದರು.