ಮನೆ ಮನರಂಜನೆ ‘ಪ್ರೀತಿಯಿಂದ ರಮೇಶ್ ಯಶಸ್ಸಿನ ಸರಳ ಸೂತ್ರಗಳು’ ಕೃತಿ ಬಿಡುಗಡೆ

‘ಪ್ರೀತಿಯಿಂದ ರಮೇಶ್ ಯಶಸ್ಸಿನ ಸರಳ ಸೂತ್ರಗಳು’ ಕೃತಿ ಬಿಡುಗಡೆ

0

ಬೆಂಗಳೂರು(Bengaluru): ನಗರದ ಬಿ. ಪಿ. ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನ ಪ್ರಕಟಿಸಿರುವ ನಟ ರಮೇಶ್ ಅರವಿಂದ್ ಅವರ ‘ಪ್ರೀತಿಯಿಂದ ರಮೇಶ್ ಯಶಸ್ಸಿನ ಸರಳ ಸೂತ್ರಗಳು’ ಕೃತಿಯನ್ನು ಹಿರಿಯ ನಟ ಅನಂತ್ ನಾಗ್ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಬಾಲ್ಯದಲ್ಲಿ ನಮಗೆ ೩೦-೪೦ ಪುಟಗಳ ಸಣ್ಣ ಸಣ್ಣ ಕೈಪಿಡಿಗಳು ಸಿಗುತ್ತಿದ್ದವು. ಮನೆಗೆ ನೆಂಟರು ಬರುವಾಗ ವಿವೇಕಾನಂದ, ಪರಮಹಂಸರ ಕುರಿತ ಕೈಪಿಡಿಗಳನ್ನು ತರುತ್ತಿದ್ದರು. ಆ ಕೈಪಿಡಿಗಳಿಂದ ನಮಗೆ ಧಾರ್ಮಿಕ, ದೇವರ ಬಗ್ಗೆ ಮಾರ್ಗದರ್ಶನ ಸಿಗುತ್ತಿತ್ತು. ರಮೇಶ್ ಅವರ ಕೃತಿ ಕೂಡ ಹೆಚ್ಚು-ಕಡಿಮೆ ಅದೇ ಮಾದರಿಯಲ್ಲಿದೆ. ನೈತಿಕತೆಯ ಬಗ್ಗೆ ಉಪಯುಕ್ತ ತಿಳವಳಿಕೆ ನೀಡುವ ಈ ಪುಸ್ತಕ ಬರೆಯುವ ಮೂಲಕ ರಮೇಶ್ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ರಮೇಶ್ ಅರವಿಂದ ಅವರು, ಘಟನೆ, ಸನ್ನಿವೇಶಗಳನ್ನು ನೋಡಿದಾಗ ಅದನ್ನು ತನ್ನ ಹತ್ತಿರದವರ ಜೊತೆ ತಕ್ಷಣವೇ ಹೇಳಿಕೊಳ್ಳಬೇಕು ಎಂದು ಅನಿಸುವುದು ಮಾನವನ ಸಹಜ ಗುಣ. ಮಾತು ಕರಗತವಾಗಿರದಿದ್ದ ಕಾಲಘಟ್ಟದಲ್ಲಿಯೂ ಸಂಜ್ಞೆಗಳ ಮೂಲಕ ತನ್ನವರಿಗೆ ಮಾಹಿತಿಯನ್ನು ಮನುಷ್ಯ ತಿಳಿಸುತ್ತಿದ್ದ. ನಡೆದ ಘಟನೆಯಲ್ಲಿ ತನ್ನ ಪಾತ್ರವಿರದಿದ್ದರೂ ಹೇಳುವ ಸಂದರ್ಭದಲ್ಲಿ ತನ್ನನ್ನು ಸೇರಿಸಿಕೊಂಡು ವಿವರಿಸುತ್ತಿದ್ದ. ಇಂತಹ ಮಾನವ ಸಹಜ ಗುಣದ ಮುಂದುವರಿದ ಭಾಗವೇ ಬರವಣಿಗೆ. ನಾನು ನನ್ನ ಜೀವನದ ಅನುಭವಗಳನ್ನು ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಈ ಕೃತಿಯಲ್ಲಿ ಬರೆಯಲು ಯತ್ನಿಸಿದ್ದೇನೆ ಎಂದರು.

ಕನ್ನಡಪ್ರಭದ ಪುರವಣಿ ಸಂಪಾದಕ ಗಿರೀಶ್‌ರಾವ್ ಹತ್ವಾರ್ (ಜೋಗಿ) ಮಾತನಾಡಿ, ರಮೇಶ್ ಆವರಿಂದ ಒಂದು ಕೆಟ್ಟ ಮಾತು ಬರಬಹುದು ಎಂದು ಕಳೆದ ೨೫ ವರ್ಷದಿಂದ ಪತ್ರಕರ್ತರಾಗಿ ನಾವು ಕಾಯುತ್ತಿದ್ದೇವೆ.ಆದರೆ ಅವರದ್ದು ಸಕಾರಾತ್ಮಕ ದೃಷ್ಟಿಕೋನ. ಸದಾ ಅಧ್ಯಯನಶೀಲತೆ, ಹುಡುಕಾಟ, ಹೊಸತನದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರ ಈ ಗುಣ ಈ ಕೃತಿಯಲ್ಲಿ ಬಿಂಬಿತವಾಗಿದೆ ಎಂದು ಹೇಳಿದರು.

ಝಿ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ವೇದಿಕೆಯಲ್ಲಿದ್ದರು.