ಮನೆ ಕಾನೂನು ಪದೇ ಪದೇ ಕೇಸು ಮುಂದೂಡಿಕೆಗೆ ಇನ್ನು ಮುಂದೆ ಅವಕಾಶವಿಲ್ಲ

ಪದೇ ಪದೇ ಕೇಸು ಮುಂದೂಡಿಕೆಗೆ ಇನ್ನು ಮುಂದೆ ಅವಕಾಶವಿಲ್ಲ

ಕೇಂದ್ರ ಸರ್ಕಾರದ ಪ್ರಸ್ತಾಪತಿ ಕಾಯ್ದೆಯಲ್ಲಿ ತ್ವರಿತ ನ್ಯಾಯಕ್ಕೆ ಹಲವು ಅಂಶ

0

ನವದೆಹಲಿ: ಬ್ರಿಟಿಷರ ಕಾಲದ ಮೂರು ಕಾಯ್ದೆ ರದ್ದತಿಗೆ ಮುಂದಾಗಿರುವ ಕೇಂದ್ರ ಸರ್ಕಾರ ಇದರ ಬೆನ್ನಲ್ಲೇ ಮೂರು ಹೊಸ ಕಾಯ್ದೆ ರಚನೆಗೂ ಮಸೂದೆ ಮಂಡಿಸಿದೆ.

ಈ ಪ್ರಸ್ತಾಪಿತ ಕಾಯ್ದೆಯಲ್ಲಿನ ಹಲವು ಅಂಶಗಳು ನ್ಯಾಯಾದಾನ ಪ್ರಕ್ರಿಯೆಯನ್ನು ಮತ್ತಷ್ಟು ಸರಳ, ಸುಲಲಿತ ಮಾಡುವುದರ ಜೊತೆಗೆ ಕಾಲಮಿತಿಯಲ್ಲಿ ತ್ವರಿತ ನ್ಯಾಯ ಒದಗಿಸಲು ನೆರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಭಾರತೀಯ ನ್ಯಾಯ ಸಂಹಿತೆಯಲ್ಲಿ 356 ಸೆಕ್ಷನ್ ಗಳಿದ್ದು, ಇದರಲ್ಲಿ 175 ತಿದ್ದುಪಡಿಯಾದ ಸೆಕ್ಷನ್ ಗಳು. 8 ಹೊಸ ಸೆಕ್ಷನ್ ಗಳು, 22 ಸೆಕ್ಷನ್ ತೆಗೆಯಲಾಗಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ 533 ಸೆಕ್ಷನ್ ಗಳಿವೆ. 160 ಸೆಕ್ಷನ್ ತಿದ್ದುಪಡಿಯಾಗಿವೆ. 9 ಹೊಸದಾಗಿ ಸೇರ್ಪಡೆಯಾಗಿವೆ. 9 ಸೆಕ್ಷನ್ ತೆಗೆಯಲಾಗಿದೆ.

ಭಾರತೀಯ ಸಾಕ್ಷ್ಯ ಸಂಹಿತೆಯಲ್ಲಿ 170 ಸೆಕ್ಷನ್ ಗಳಿದ್ದು, 23 ಬದಲಾವಣೆ ಮಾಡಲಾಗಿದೆ. 1 ಹೊಸದಾಗಿ ಸೇರ್ಪಡೆಯಾಗಿದೆ. 5 ಸೆಕ್ಷನ್ ತೆಗೆಯಲಾಗಿದೆ.

ಐಸಿಸಿಗೆ ಪ್ರತಿಯಾಗಿ ಭಾರತೀಯ ನ್ಯಾಯಸಂಹಿತೆ ಸಿಆರ್ ಪಿಸಿಗೆ ಬದಲಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಿ ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಬದಲಾಗಿ ಜಾರಿಗೊಳಿಸಲಾಗುತ್ತಿರುವ ಭಾರತೀಯ ಸಾಕ್ಷ್ಯ ಕಾಯ್ದೆಯಲ್ಲಿ ಪ್ರಮುಖ ಅಂಶಗಳು ಪ್ರಾಸ್ತಾಪಿತವಾಗಿದೆ.

2 ಬಾರಿ ಮಾತ್ರ ವಿಚಾರಣೆ ಮುಂದೂಡಿಕೆಗೆ ಅವಕಾಶ

ಯಾವುದೇ ಪ್ರಕರಣಗಳ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯಗಳು ಗರಿಷ್ಠ 2 ಬಾರಿ ಮಾತ್ರ ಅವುಗಳನ್ನು ಮುಂದೂಡಲು ಅವಕಾಶ ನೀಡಲಾಗಿದೆ. ಮುಂದೂಡಿಕೆಗೆ ಮಾಡುವ ಮೊದಲು ಎದುರು ಪಕ್ಷದವರ ವಾದವನ್ನು ಕೇಳುವುದು ಮತ್ತು ಮುಂದೂಡಿಕೆಗೆ ನಿಗದಿತ ಕಾರಣವನ್ನು ಲಿಖಿತವಾಗಿ ದಾಖಲಿಸುವುದು ಕಡ್ಡಾಯವಾಗಿದೆ

ಅಪ್ರಾಪ್ತ ವಯಸ್ಸಿನ ಪತ್ನಿ ಜೊತೆ ಲೈಂಗಿಕ ಸಂಪರ್ಕ ಅಪರಾಧ

ಪ್ರಸ್ತುತ ಜಾರಿಯಲ್ಲಿರುವ ಐಸಿಸಿ ಸೆಕ್ಷನ್ ನ ಪ್ರಕಾರ ಅಪ್ರಾಪ್ತ ಪತ್ನಿಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದರೆ ಅದು ಅತ್ಯಾಚಾರವಾಗುವುದಿಲ್ಲ. ಆದರೆ ಫೋಕ್ಸೊ ಅಡಿ ಅದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಆದರೆ ಹೊಸ ಮಸೂದೆಯಲ್ಲಿ ಈ ವಯಸ್ಸನ್ನು 11ಕ್ಕೆ ಏರಿಕೆ ಮಾಡಲಾಗಿದೆ. ಈ ಮೂಲಕ ಮಕ್ಕಳ ರಕ್ಷಣೆಗೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗಿದೆ.

ವೈವಾಹಿಕ ಅತ್ಯಾಚಾರ ವಿಷಯ ಕಾಯ್ದೆಯಲ್ಲಿ ಪ್ರಸ್ತಾಪವಿಲ್ಲ

ಹೊಸ ಮಸೂದೆಯಲ್ಲಿ ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಲು ಯಾವುದೇ ಅಂಶವನ್ನು ಸೇರ್ಪಡೆ ಮಾಡಲಾಗಿಲ್ಲ. ಲೈಂಗಿಕ ಸಂಪರ್ಕಕ್ಕಾಗಿ ಪತ್ನಿಯ ಮೇಲೆ ನಡೆಯುವ ಬಲವಂತವನ್ನು ಅತ್ಯಾಚಾರ ಎಂದು ಪರಿಗಣಿಸಬೇಕು ಎಂದು ನ್ಯಾಯಾಲಯಗಳು ಹೇಳಿದ್ದರೂ, ಇಂತಹ ಪ್ರಕರಣಗಳನ್ನು ಅಪರಾಧ ಎಂದು ಪರಿಗಣಿಸಲಾಗಿಲ್ಲ.

ಹಿಟ್ ಅಂಡ್ ರನ್ ಕೇಸ್ ನಲ್ಲಿ ಇನ್ನು 10 ವರ್ಷಗಳ ಜೈಲು

ಮಾರಣಾಂತಿಕ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಗರಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಹೊಸ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ನಿರ್ಲಕ್ಷ್ಯ ಚಾಲನೆಗೂ ಸಹ 3 ವರ್ಷ ಜೈಲು ಮತ್ತು ದಂಡ ವಿಧಿಸಲು ಅವಕಾಶ ಒದಗಿಸಲಾಗಿದೆ. ಈ ಮೊದಲು ಗರಿಷ್ಠ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು.

ದ್ವೇಷ ಭಾಷಣಕ್ಕೆ 3 ವರ್ಷ ಜೈಲು

ಹೊಸದಾಗಿ ಮಂಡನೆಯಾಗಿರುವ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ದ್ವೇಷ ಭಾಷಣಕ್ಕೆ 3 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಒದಗಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಮಾತುಗಳು ಬರಹಗಳು, ಮತ್ತು ಸನ್ನೆಗಳನ್ನು ದ್ವೇಷ ಭಾಷಣದಡಿ ಪರಿಗಣಿಸಿ ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ.

ಮೊದಲ ಸಲದ ಅಪರಾಧಿಗಳಿಗೆ ಸುಲಭ ಜಾಮೀನಿಗೆ ಅವಕಾಶ

ಮೊದಲ ಬಾರಿ ಅಪರಾಧ ಮಾಡಿ ಶಿಕ್ಷೆಗೆ ಒಳಗಾದವರು ತಮ್ಮ ಶಿಕ್ಷೆ ಪ್ರಮಾಣದ 3ನೇ 1 ಭಾಗದಷ್ಟು ಪೂರ್ಣಗೊಳಿಸಿದರೆ ಜಾಮೀನಿಗೆ  ಅರ್ಜಿ ಸಲ್ಲಿಕೆ ಮಾಡಬಹುದು. ಇದು ಜೀವಾವಧಿ ಮತ್ತು ಗಲ್ಲು ಶಿಕ್ಷೆಗೆ ಒಳಗಾದ ಅಪರಾಧಿಗಳಿಗೆ ಅನ್ವಯವಾಗುವುದಿಲ್ಲ.

ಆರೋಪಿ ತಲೆಮರೆಸಿಕೊಂಡಿದ್ದರೂ ಕೋರ್ಟ್ ನಲ್ಲಿ ವಿಚಾರಣೆಗೆ ಅವಕಾಶ

ಯಾವುದೇ ಅಪರಾಧ ಪ್ರಕರಣದಲ್ಲಿ ಕೋರ್ಟ್ ವಿಚಾರಣೆಯ ವೇಳೆ ಆರೋಪಿ ತಲೆಮರೆಸಿಕೊಂಡಿದ್ದರೂ ವಿಚಾರಣೆ ನಡೆಸಲು ಹೊಸ ಮಸೂದೆಯಲ್ಲಿ ಅವಕಾಶ ಒದಗಿಸಲಾಗಿದೆ. ಅಲ್ಲದೇ  ತಪ್ಪಿಸಿಕೊಂಡಿರುವ ಆರೋಪಿಗಳನ್ನು ಹುಡುಕಿ 90 ದಿನಗಳ ಬಳಿಕ ಕೋರ್ಟ್ ಗೆ ಹಾಜರುಪಡಿಸಬಹುದಾಗಿದೆ ವಿದೇಶಗಳಲ್ಲಿ ತಲೆಮರೆಸಿಕೊಳ್ಳುವ ಆರೋಪಿಗಳಿಗೆ ಶಿಕ್ಷೆ ನೀಡಲು ಇದು ಅವಕಾಶ ಒದಗಿಸುತ್ತದೆ.

ಸಾಕ್ಷಿಗಳ ರಕ್ಷಣೆ ಅಧಿಕಾರ ಎಸ್ ಪಿಗೆ

ಯಾವುದೇ ಅಪರಾಧ ಪ್ರಕರಣಗಳಲ್ಲಿ ಸಾಕ್ಷಿಗಳ ಜೀವಕ್ಕೆ ತೊಂದರೆ ಇದೆ ಎಂಬುದು ಕಂಡುಬಂದರೆ ಅವರಿಗೆ ರಕ್ಷಣೆ ನೀಡುವ ಅಧಿಕಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಒದಗಿಸಲಾಗಿದೆ ಇದಕ್ಕಾಗಿ ರಾಜ್ಯ ಸರ್ಕಾರದ ಅನುಮತಿಯನ್ನು ಕಾಯುವ ಅವಶ್ಯಕತೆ ಇಲ್ಲ.