ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋ ದರದ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ.
ಆರ್ ಬಿಐನ ಹಣಕಾಸು ನೀತಿ ಸಮಿತಿ ಸತತ ಐದನೇ ತಿಂಗಳಿನಲ್ಲಿಯೂ ಶೇ.6.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ತಿಳಿಸಿದೆ.
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 6ರಂದು ಆರಂಭಗೊಂಡಿದ್ದ ಮೂರು ದಿನಗಳ ಕಾಲದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರಿಂದ ಗೃಹ ಹಾಗೂ ವಾಹನ ಸಾಲದ ಇಎಂಐ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಮಧ್ಯಮ ಆರ್ಥಿಕ ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆ ಬಗ್ಗೆ ನಿಗಾ ಇರಿಸಿದ್ದು, ಹಣದುಬ್ಬರವನ್ನು ಪರಿಶೀಲಿಸಲಾಗುತ್ತಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶೇ.6.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಒಮ್ಮತದ ನಿರ್ಧಾರ ತೆಗೆದುಕೊಂಡಿರುವುದಾಗಿ ದಾಸ್ ಹೇಳಿದರು.
ಹಣದುಬ್ಬರದ ಕುರಿತು ನಿಗಾ ಇರಿಸಿದ್ದು, ತುರ್ತು ಸಂದರ್ಭದಲ್ಲಿ ವಿಶೇಷ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಕ್ತಿಕಾಂತ್ ದಾಸ್ ಈ ಸಂದರ್ಭದಲ್ಲಿ ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಸ್ಥಿತಿಗತಿಯನ್ನು ಗಮನಿಸಲಾಗುತ್ತಿದೆ. ಕಳೆದ ವರ್ಷದಿಂದ ಹಣದುಬ್ಬರ ಕಡಿಮೆಯಾಗುತ್ತಿದ್ದು, ಇನ್ನೂ ಹಲವು ದೇಶಗಳಲ್ಲಿ ಹಣದುಬ್ಬರ ಏರುಗತಿಯಲ್ಲಿಯೇ ಇದೆ ಎಂದು ಆರ್ ಬಿಐ ಹೇಳಿದೆ.