ಮನೆ ಕಾನೂನು ಬೇಸಿಗೆ ಅಂತ್ಯದವರೆಗೆ ಜಿಲ್ಲಾ, ವಿಚಾರಣಾ ನ್ಯಾಯಾಲಯಗಳಲ್ಲಿ ವಕೀಲರಿಗೆ ಕಪ್ಪು ಕೋಟ್‌ ಧರಿಸುವುದರಿಂದ ವಿನಾಯಿತಿ ಕೋರಿಕೆ

ಬೇಸಿಗೆ ಅಂತ್ಯದವರೆಗೆ ಜಿಲ್ಲಾ, ವಿಚಾರಣಾ ನ್ಯಾಯಾಲಯಗಳಲ್ಲಿ ವಕೀಲರಿಗೆ ಕಪ್ಪು ಕೋಟ್‌ ಧರಿಸುವುದರಿಂದ ವಿನಾಯಿತಿ ಕೋರಿಕೆ

0

ಬಿಸಿಲ ಝಳ ಹೆಚ್ಚುತ್ತಿರುವ ಹಿನ್ನೆಲೆಯ ಬೇಸಿಗೆ ಕಾಲ ಮುಗಿಯುವವರೆಗೆ ಮಾರ್ಚ್‌ 15ರಿಂದ ಅನ್ವಯಿಸುವಂತೆ ನೆರೆಯ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯದಲ್ಲಿನ ವಕೀಲರಿಗೆ ಕಪ್ಪು ಕೋಟ್‌ ಧರಿಸುವುದರಿಂದ ವಿನಾಯಿತಿ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರಿಗೆ ಬೆಂಗಳೂರು ವಕೀಲರ ಸಂಘ ಈಚೆಗೆ ಪತ್ರ ಬರೆದಿದೆ.

Join Our Whatsapp Group

ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಕಪ್ಪು ಕೋಟ್‌ ಹಾಕುವುದರಿಂದ ವಕೀಲರಿಗೆ ವಿನಾಯಿತಿ ಕಲ್ಪಿಸಲಾಗಿದೆ. ಆ ಎರಡೂ ರಾಜ್ಯಗಳಂತೆ ಕರ್ನಾಟಕದಲ್ಲೂ ಅದೇ ವಾತಾವರಣ ಇದೆ ಎಂದು ಹೇಳಲಾಗಿದೆ.

ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಎಲ್ಲಿಯೂ ಹವಾನಿಯಂತ್ರಿತ ವ್ಯವಸ್ಥೆ ಇಲ್ಲದಿರುವುದರಿಂದ ಈಗಷ್ಟೇ ಬಿಸಿಲ ಬೇಗೆ ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ಬಿಳಿಯ ಬಟ್ಟೆಯ ಮೇಲೆ ಕಪ್ಪು ಕೋಟ್‌ ಮತ್ತು ಬ್ಯಾಂಡ್‌ ಹಾಕುವುದು ಕಷ್ಟವಾಗಿದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಕಪ್ಪು ಕೋಟ್‌ ಧರಿಸುವುದರಿಂದ ಬೇಸಿಗೆ ರಜಾಕಾಲ ಮುಗಿದು ನ್ಯಾಯಾಲಯಗಳು ಕೆಲಸ ಪುನಾರಂಭಿಸುವವರೆಗೆ ಮಾರ್ಚ್‌ 15ರಿಂದ ಅನ್ವಯವಾಗುವಂತೆ ವಿನಾಯಿತಿ ನೀಡಬೇಕು ಕೋರಲಾಗಿದೆ.

ಬ್ರಿಟಿಷರಿಗೆ ಅಲ್ಲಿ ಚಳಿಯ ವಾತಾವರಣ ಇರುವುದರಿಂದ ಕೋಟ್‌ ಮತ್ತು ಬಿಳಿಯ ಶರ್ಟ್‌ ಧರಿಸುವುದು ಸೂಕ್ತವಾಗಿದೆ. ಭಾರತದಲ್ಲಿ ಬೇಸಿಗೆ ತೀವ್ರವಾಗಿರುವ ಈ ಸಂದರ್ಭದಲ್ಲಿ ಬ್ರಿಟಿಷರ ವಸ್ತ್ರ ಬಳುವಳಿಗೆ ಯಾವುದೇ ಸ್ಥಳಾವಕಾಶವಿಲ್ಲ. ಹೀಗಾಗಿ, ಕರ್ನಾಟಕದ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಕಪ್ಪು ಕೋಟ್‌ ಧರಿಸುವುದರಿಂದ ವಕೀಲರಿಗೆ ವಿನಾಯಿತಿ ನೀಡಬೇಕು. ಈ ಸಂಬಂಧ ಅಗತ್ಯ ನಿರ್ದೇಶನ ಹೊರಡಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗೆ ವಕೀಲರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.