ಮನೆ ಕಾನೂನು ಲೋಕಾ ವೆಬ್’ಸೈಟ್’ನಲ್ಲಿ ಎಫ್ಐಆರ್ ಹಾಕಲು ಕೋರಿಕೆ: ರಾಜ್ಯ ಸರ್ಕಾರ, ಲೋಕಾಯುಕ್ತಕ್ಕೆ ಹೈಕೋರ್ಟ್ ನೋಟಿಸ್

ಲೋಕಾ ವೆಬ್’ಸೈಟ್’ನಲ್ಲಿ ಎಫ್ಐಆರ್ ಹಾಕಲು ಕೋರಿಕೆ: ರಾಜ್ಯ ಸರ್ಕಾರ, ಲೋಕಾಯುಕ್ತಕ್ಕೆ ಹೈಕೋರ್ಟ್ ನೋಟಿಸ್

0

ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಾದ 24 ಗಂಟೆಗಳಲ್ಲಿ ಅದನ್ನು ವೆಬ್’ಸೈಟ್’ನಲ್ಲಿ ಹಾಕಲು ಲೋಕಾಯುಕ್ತಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರಿನ ವಕೀಲ ಎಸ್ ಉಮಾಪತಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಕೀಲೆ ಪ್ರತಿಮಾ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪರವಾಗಿ ನೋಟಿಸ್ ಪಡೆದುಕೊಳ್ಳುವುದಾಗಿ ತಿಳಿಸಿದರು. ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ (ಎಡಿಜಿಪಿ) ಪೀಠವು ನೋಟಿಸ್ ಜಾರಿ ಮಾಡಿತು. ಪ್ರತ್ಯೇಕವಾಗಿ ಲೋಕಾಯುಕ್ತ ಎಡಿಜಿಪಿಗೆ ಅರ್ಜಿದಾರರು ನೋಟಿಸ್ ತಲುಪಿಸಬಹುದು ಎಂದ ಪೀಠವು ವಿಚಾರಣೆಯನ್ನು ನವೆಂಬರ್ 9ಕ್ಕೆ ಮುಂದೂಡಿತು.

ಎಫ್ಐಆರ್ ದಾಖಲಾದ 24 ಗಂಟೆಗಳಲ್ಲಿ ಅದನ್ನು ಸಂಬಂಧಪಟ್ಟ ಅಧಿಕೃತ ವೆಬ್’ಸೈಟ್’ನಲ್ಲಿ ಪ್ರಕಟಿಸಬೇಕು ಎಂದು 2016ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಇದನ್ನು ಸಿಬಿಐ ಸೇರಿದಂತೆ ಉಳಿದ ತನಿಖಾ ಸಂಸ್ಥೆಗಳು ಪಾಲಿಸುತ್ತಿವೆ. ಸುಪ್ರೀಂ ಕೋರ್ಟ್ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ 2018ರಲ್ಲಿ ಎಸಿಬಿ ಮತ್ತು ಬಿಎಂಟಿಎಫ್’ಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದನ್ನು ಎಸಿಬಿ ಪಾಲಿಸುತ್ತಾ ಬಂದಿತ್ತು.

ಈ ಮಧ್ಯೆ, ಎಸಿಬಿಯನ್ನು ರದ್ದುಗೊಳಿಸಿ 2022ರ ಆಗಸ್ಟ್ 11ರಂದು ತೀರ್ಪು ನೀಡಿದ ಹೈಕೋರ್ಟ್, ಲೋಕಾಯುಕ್ತದ ಅಧಿಕಾರವನ್ನು ಮರುಸ್ಥಾಪಿಸಿ ಆದೇಶಿಸಿದೆ.  ಆದರೆ, ಎಫ್ಐಆರ್ ದಾಖಲಾದ 24 ಗಂಟೆಗಳಲ್ಲಿ ಅದನ್ನು ವೆಬ್’ಸೈಟ್’ನಲ್ಲಿ ಪ್ರಕಟಿಸಬೇಕು ಎನ್ನುವ ಸುಪ್ರೀಂ ಕೋರ್ಟ್ ಆದೇಶವನ್ನು ಲೋಕಾಯುಕ್ತ ಪೊಲೀಸರು ಪಾಲಿಸುತ್ತಿಲ್ಲ. ಇದರಿಂದ ಮುಂದಿನ ಕಾನೂನು ಪ್ರಕ್ರಿಯೆಗೆ ದೂರುದಾರರು, ಕಕ್ಷಿದಾರರು ಮತ್ತು ವಕೀಲರಿಗೆ ಸಾಕಷ್ಟು ಅನನೂಕೂಲವಾಗುತ್ತಿದೆ. ಈ ಬಗ್ಗೆ ಅರ್ಜಿದಾರರು 2022ರ ಸೆಪ್ಟೆಂಬರ್ 19ರಂದು ದೂರು ಕೊಟ್ಟಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.