ನವದೆಹಲಿ: ದೇಶದ ಆರ್ಥಿಕಾಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಆರ್‌ಬಿಐ ತನ್ನ ಪ್ರಮುಖ ಬಡ್ಡಿದರಗಳಾದ ರೆಪೋ ಹಾಗು ರಿವರ್ಸ್ ರೆಪೋದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಸದ್ಯಕ್ಕೆ ರೆಪೋ ಹಾಗು ರಿವರ್ಸ್ ರೆಪೋ ದರಗಳು ಕ್ರಮವಾಗಿ ಶೇ 4 ಮತ್ತು ಶೇ 3.35ರಷ್ಟಿದೆ. ಹಣಕಾಸು ವರ್ಷ 2022 (2021-22)ರಲ್ಲಿ ದೇಶದ ಆರ್ಥಿಕ ವೃದ್ಧಿ ದರ ಶೇ 9.2ರಷ್ಟಿದ್ದು, ಇದು ದೇಶದ ಬೆಳವಣಿಗೆಯನ್ನು ಕೋವಿಡ್ ಸಾಂಕ್ರಾಮಿಕಕ್ಕೂ ಪೂರ್ವದ ವರ್ಷಕ್ಕೆ ಕೊಂಡೊಯ್ಯುತ್ತದೆ. ಇದೇ ರೀತಿ 2022-23ನೇ ಹಣಕಾಸು ವರ್ಷವು ಶೇ 7.8ರಷ್ಟು ಬೆಳವಣಿಗೆ ಸಾಧಿಸಲಿದೆ. ದೇಶದಲ್ಲಿ ಹಣಕಾಸು ವರ್ಷ 2022ರಲ್ಲಿ ಸಗಟು ಹಣದುಬ್ಬರ ದರವು ಶೇ 5.3ರಷ್ಟಿರಲಿದ್ದು, 2022-23ರಲ್ಲಿ ಶೇ 4.5ರಷ್ಟಿರಲಿದೆ ಎಂದು ತಿಳಿಸಿದ್ದಾರೆ.
ಇ-ರುಪಿ ಡಿಜಿಟಲ್ ವೋಚರ್‌ಗಳಿಗಿದ್ದ ಸದ್ಯದ ಮಿತಿಯನ್ನು 10 ಸಾವಿರ ರೂಪಾಯಿಯಿಂದ 1 ಲಕ್ಷಕ್ಕೇರಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.
ಆಟೊಮೊಬೈಲ್ ವಲಯ, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಕುಸಿತ ಸೇರಿದಂತೆ ಕೆಲವು ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳ ಮುನ್ನಡೆಗೆ ತೊಡಕಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯ ಬಗ್ಗೆ ನಿಗಾವಹಿಸಬೇಕಿದೆ ಎಂದು ಹೇಳಿದರು.
ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಗುರುವಾರ ಪ್ರಕಟಣೆ ಹೊರಡಿಸಿದೆ.