ಹೊಸದಿಲ್ಲಿ(Newdelhi): ಭಾರತದ ಸನ್ನಿವೇಶದಲ್ಲಿ ಇತಿಹಾಸವನ್ನು ಮರು ರಚನೆ ಮಾಡಿ. ನಿಮ್ಮ ಅವರ ಪ್ರಯತ್ನಗಳಿಗೆ ಸರ್ಕಾರ ಬೆಂಬಲ ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತಿಹಾಸಕಾರರಿಗೆ ಸಲಹೆ ನೀಡಿದ್ದಾರೆ.
ಅಸ್ಸಾಂ ಸರ್ಕಾರದ ವತಿಯಿಂದ ದೆಹಲಿಯಲ್ಲಿ ಏರ್ಪಡಿಸಲಾದ 17 ನೇ ಶತಮಾನದ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ 400 ನೇ ಜನ್ಮ ವಾರ್ಷಿಕೋತ್ಸವದ ಮೂರು ದಿನಗಳ ಆಚರಣೆಯ 2 ನೇ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನೊಬ್ಬ ಇತಿಹಾಸದ ವಿದ್ಯಾರ್ಥಿ. ನಮ್ಮ ಇತಿಹಾಸವನ್ನು ಸರಿಯಾಗಿ ಪ್ರಸ್ತುತಪಡಿಸಲಾಗಿಲ್ಲ ಮತ್ತು ಅದನ್ನು ತಿರುಚಲಾಗಿದೆ ಎಂದು ನಾನು ಬಹಳಷ್ಟು ಬಾರಿ ತಿಳಿದುಕೊಂಡಿದ್ದೇನೆ. ಬಹುಶಃ ಅದು ಸರಿಯಾಗಿರಬಹುದು. ಆದರೆ ಈಗ ನಾವು ಇದನ್ನು ಸರಿಪಡಿಸಬೇಕಾಗಿದೆ ಎಂದು ಶಾ ಹೇಳಿದರು.
ಇತಿಹಾಸದ ಈ ವಿವರಣೆಯು ಸರಿಯಾಗಿಲ್ಲ. ದೇಶದ ಯಾವುದೇ ಭಾಗದಲ್ಲಿ 150 ವರ್ಷಕ್ಕೂ ಹೆಚ್ಚು ಆಡಳಿತ ನಡೆಸಿದ 30 ಸಾಮ್ರಾಜ್ಯಗಳ ಮೇಲೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಶ್ರೇಷ್ಠ ವ್ಯಕ್ತಿಗಳ ಬಗ್ಗೆ ಸಂಶೋಧನೆ ನಡೆಸಲು ಪ್ರಯತ್ನಿಸಿ ಎಂದು ಇಲ್ಲಿ ಕುಳಿತಿರುವ ಎಲ್ಲ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯ ಪ್ರೊಫೆಸರ್‌ಗಳಲ್ಲಿ ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಒಮ್ಮೆ ಚರಿತ್ರೆ ಸಂಪೂರ್ಣ ಬರೆದಾಗ ಈಗ ಪ್ರಸಾರ ಮಾಡುತ್ತಿರುವ ಸುಳ್ಳು ವ್ಯಾಖ್ಯಾನದ ಆಲೋಚನೆಯು ನಿವಾರಣೆಯಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅವರು ಲಚಿತ್ ಕುರಿತ ಸಾಕ್ಷ್ಯಚಿತ್ರವನ್ನು ಉದ್ಘಾಟಿಸಿದರು. ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ಮತ್ತು ಭಾರತದ ಉಳಿದ ಭಾಗಗಳ ನಡುವಿನ ಅಂತರವನ್ನು ಕಡಿಮೆ ಮಾಡಿದ್ದಾರೆ. ಸರ್ಕಾರದ ಪ್ರಯತ್ನದಿಂದ ಈಶಾನ್ಯದಲ್ಲಿ ಶಾಂತಿ ನೆಲೆಸಿದೆ ಎಂದರು.