ಶಿವಮೊಗ್ಗ: ಶಿಕ್ಷಣ ಮತ್ತು ಮಾನವೀಯತೆ ಒಂದೇ ಹಾದಿಯಲ್ಲಿ ಸಾಗಬೇಕು ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಮತ್ತೊಂದು ಶ್ಲಾಘನೀಯ ಹೆಜ್ಜೆ ಹಾಕಿದೆ. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಸತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಿಶೇಷ ವಸತಿ ಶಾಲೆ ಆರಂಭಿಸಲು ಸಕಾಲಿಕ ಯೋಜನೆ ರೂಪಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದರು.
ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ಕ್ಯಾನ್ಸರ್ ಪೀಡಿತ ಮಕ್ಕಳು ಆರೋಗ್ಯ ಸಮಸ್ಯೆಯಿಂದಾಗಿ ಸಾಮಾನ್ಯ ಶಾಲಾ ಜೀವನದಿಂದ ದೂರವಾಗುತ್ತಾರೆ. ಅವರನ್ನು ಶಿಕ್ಷಣದಿಂದ ವಂಚಿತಗೊಳಿಸಬಾರದು ಎಂಬ ಉದ್ದೇಶ ನಮ್ಮದು” ಎಂದು ಹೇಳಿದರು.
ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಆಟ, ಪಾಠದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಮಕ್ಕಳಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣವೇ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಕರೆದೊಯ್ಯಲು ಮಿನಿ ಬಸ್ ಮತ್ತು ಕಾರುಗಳ ಸೌಲಭ್ಯ ಒದಗಿಸಲಾಗುವುದು ಎಂದರು.
ಈ ಯೋಜನೆಯ ಪ್ರಥಮ ಹಂತವಾಗಿ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹತ್ತಿರದಲ್ಲೇ ಈ ವಸತಿ ಶಾಲೆ ಆರಂಭಿಸಲಾಗುವುದು. ಈ ವಸತಿ ಶಾಲೆಯಲ್ಲಿ ಪ್ರಸ್ತುತ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ಹೆಚ್ಚಿನ ತರಗತಿಗಳು ಮತ್ತು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ವಿಸ್ತರಣೆ ಮಾಡಲಾಗುವುದು.
“ಈ ಮಕ್ಕಳನ್ನು ಗೌರವಯುತವಾಗಿ ಬದುಕಿಸಬೇಕೆಂಬ ನಂಬಿಕೆಯಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಅವರ ಜೀವನದಲ್ಲಿ ಶಕ್ತಿಯ ಬೆಳಕು ಬೆಳಗಿಸಲು ಶಿಕ್ಷಣ ಅತ್ಯಂತ ಶಕ್ತಿ ನೀಡುವ ಸಾಧನವಾಗಿದೆ” ಎಂದರು.
ಈ ಯೋಜನೆಗೆ ಖಾಸಗಿ ಎನ್‌ಜಿಓಗಳ ಸಹಕಾರವೂ ದೊರೆಯುತ್ತಿದ್ದು, ಈಗಾಗಲೇ ಒಂದು ಎನ್‌ಜಿಓ ಜೊತೆ ಸಭೆ ನಡೆಸಿ ಯೋಜನೆ ರೂಪಿಸಲಾಗಿದೆ. ಕಿದ್ವಾಯಿ ಆಸ್ಪತ್ರೆ ಸಮೀಪ ಖಾಸಗಿ ಕಟ್ಟಡವೊಂದನ್ನು ಬಳಸುವತ್ತ ಚಿಂತನೆ ನಡೆಸಲಾಗಿದೆ. ಜುಲೈ ಅಂತ್ಯದೊಳಗೆ ಪ್ರಾರಂಭಿಸಲಾಗುವುದು ಎಂದು ಸಚಿವರು ಹೇಳಿದರು.















