ಮನೆ ರಾಷ್ಟ್ರೀಯ ಕಾಂಗ್ರೆಸ್‌, ಬಿಜೆಡಿ ಲೂಟಿಯಿಂದ ಸಂಪನ್ಮೂಲಭರಿತ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ

ಕಾಂಗ್ರೆಸ್‌, ಬಿಜೆಡಿ ಲೂಟಿಯಿಂದ ಸಂಪನ್ಮೂಲಭರಿತ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ

0

ಬೆಹ್ರಾಂಪುರ್(ಒಡಿಶಾ): ಸ್ವಾತಂತ್ರ್ಯ ನಂತರ ಏಳು ದಶಕಗಳ ಕಾಲದಲ್ಲಿ ಮೊದಲು ಕಾಂಗ್ರೆಸ್‌ ನಂತರ ಬಿಜು ಜನತಾ ದಳ ಲೂಟಿ ಮಾಡುವ ಮೂಲಕ ಸಂಪನ್ಮೂಲಭರಿತ ಒಡಿಶಾವನ್ನು ಬಡ ರಾಜ್ಯವನ್ನಾಗಿರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

Join Our Whatsapp Group

ಸೋಮವಾರ (ಮೇ 06) ಪ್ರಧಾನಿ ಮೋದಿ ಅವರು, ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಹ್ರಾಂಪುರ್‌ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಒಡಿಶಾದಲ್ಲಿ ನೀರಿದೆ, ಫಲವತ್ತಾದ ಭೂಮಿ, ಖನಿಜಗಳು, ಕರಾವಳಿ ಪ್ರದೇಶ, ಇತಿಹಾಸ, ಸಂಸ್ಕೃತಿ ಎಲ್ಲವೂ ಇದೆ. ಆದರೆ ಒಡಿಶಾದ ಜನರೇಕೆ ಬಡವರಾಗಿದ್ದಾರೆ? ಇದಕ್ಕೆ ಉತ್ತರ ಲೂಟಿ. ಮೊದಲು ಕಾಂಗ್ರೆಸ್‌ ಮುಖಂಡರು ಲೂಟಿ ಮಾಡಿದರು, ನಂತರ ಬಿಜೆಡಿ ಮುಖಂಡರು. ಬಿಜೆಡಿಯ ಪುಟ್ಟ ನಾಯಕನೂ ಕೂಡಾ ದೊಡ್ಡ ಬಂಗಲೆಗಳನ್ನು ಹೊಂದಿದ್ದಾನೆ ಎಂದು ಪ್ರಧಾನಿ ದೂರಿದರು.

ಒಡಿಶಾದ ಕಾರ್ಮಿಕರು ಯಾಕೆ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ? ಇಲ್ಲಿನ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರ ಹುದ್ದೆ ಯಾಕೆ ಖಾಲಿ ಇದೆ? ಶಾಲೆಗಳಿಂದ ವಿದ್ಯಾರ್ಥಿಗಳು ಯಾಕೆ ದೂರ ಉಳಿಯುತ್ತಿದ್ದಾರೆ? ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ, ಏಳು ದಶಕಗಳ ಕಾಲ ಆಡಳಿತ ನಡೆಸಿದ ಈ ಮುಖಂಡರಿಗೆ ಒಡಿಶಾದ ಅಭಿವೃದ್ಧಿ ಬೇಕಾಗಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ಸೋನಿಯಾ ಗಾಂಧಿಯ ರಿಮೋಟ್‌ ಕಂಟ್ರೋಲ್‌ ಸರ್ಕಾರ ಇದ್ದಾಗ, ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದರು. ಹತ್ತು ವರ್ಷಗಳಲ್ಲಿ ಸಿಂಗ್‌ ಸರ್ಕಾರ ಒಡಿಶಾಕ್ಕೆ ನೀಡಿದ್ದು 1 ಲಕ್ಷ ಕೋಟಿ ರೂಪಾಯಿ ಮಾತ್ರ, ಆದರೆ ಮೋದಿ ಕಳೆದ 10 ವರ್ಷಗಳಲ್ಲಿ 3.5 ಲಕ್ಷ ಕೋಟಿ ರೂಪಾಯಿ ನೀಡಿದೆ ಎಂದರು.