ಬೆಂಗಳೂರು: ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ನಡೆಸುವುದಕ್ಕೆ ಹಿಂದೂ ಸಂಘಟನೆಗಳ ವಿರೋಧಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ತಮ್ಮ ಅಸಮಾಧಾನ ಹೊರ ಹಾಕಿದ್ದು, ಈ ಕುರಿತು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ. ಇಲ್ಲಿ ಎಲ್ಲಾ ಧರ್ಮೀಯರು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಆದರೆ, ಕೆಲವರು ಧರ್ಮಗಳ ನಡುವೆ ಕಂದಕವನ್ನ ಸೃಷ್ಟಿಸುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಕೆಲ ಹಿತಾಸಕ್ತಿಗಳು ಭಿತ್ತಿ ಪತ್ರಗಳನ್ನ ಹಾಕುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ, ದ್ವೇಷ ಸೃಷ್ಟಿಸಲು ಹೊರಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿರುವ ಬಗ್ಗೆ ಮುಲ್ಕಿ ಸೇರಿದಂತೆ ಕೆಲವೆಡೆ ಭಿತ್ತಿ ಪತ್ರಗಳನ್ನ ಹಾಕಲಾಗಿದೆ. ಇದೊಂದು ಅಸಹ್ಯ ಕೃತ್ಯ. ಇದಕ್ಕೆ ಹಿಂದೂ ಸಹೋದರರು ಬೆಂಬಲ ಕೊಡಬಾರದು. ಬಿಜೆಪಿ ಸರ್ಕಾರ ಈ ವಿಚಾರವಾಗಿ ಮೌನವಾಗಿದ್ದು, ಒಳಗೊಳಗೆ ಖುಷಿ ಪಡುತ್ತಿದೆ. ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಯು.ಟಿ.ಖಾದರ್ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಮಾಹಿತಿ ನೀಡಿದರು.
ಏನಿದು ವಿವಾದ?
ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯ ಪ್ರಸಿದ್ಧ ದೇವಸ್ಥಾನ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರೋತ್ಸವ ಮಾರ್ಚ್ 17 ರಿಂದ ಮಾರ್ಚ್ 25ರವರೆಗೆ ನಡೆಯಲಿದೆ. ಮಾರ್ಚ್ 23 ರಂದು ಹಗಲು ರಥೋತ್ಸವ ನಡೆದರೆ, ಮಾರ್ಚ್ 24ರಂದು ರಾತ್ರಿ ರಥೋತ್ಸವ ನಡೆಯಲಿದೆ. ಮಾರ್ಚ್25 ರಂದು ದುರ್ಗಾಪರಮೇಶ್ವರಿಯ ಶಯನ ಮಹೋತ್ಸವ ನಡೆಯಲಿದೆ.
ಈ ಮೂರು ದಿನದಲ್ಲಿ ಬಪ್ಪನಾಡು ಕ್ಷೇತ್ರದಲ್ಲಿ ಕೋಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಒಂದು ಕೋಟಿ ರೂಪಾಯಿಗೂ ಅಧಿಕ ಮಲ್ಲಿಗೆ ಹೂವು ಮಾರಾಟವಾಗುತ್ತದೆ. ಈ ಮಲ್ಲಿಗೆ ಹೂವಿನ ಮಾರಾಟವನ್ನು ಮುಸ್ಲಿಮರೇ ಮಾಡುತ್ತಿದ್ದು, ಈ ಬಾರಿ ಮಾತ್ರ ಮುಸ್ಲಿಮರಿಗೆ ಅವಕಾಶ ನಿರಾಕರಿಸಲಾಗಿದೆ.














