ಮನೆ ಕಾನೂನು ಮುಟ್ಟುಗೋಲು ಹಾಕಿಕೊಂಡಿರುವ ಪಾಸ್‌ಪೋರ್ಟ್‌ ವಾಪಸ್‌; ತಿಂಗಳಲ್ಲಿ ಶುಶ್ರೂಷಕಿ ಮನವಿ ಪರಿಗಣಿಸಲು ಕೇಂದ್ರಕ್ಕೆ ಆದೇಶ

ಮುಟ್ಟುಗೋಲು ಹಾಕಿಕೊಂಡಿರುವ ಪಾಸ್‌ಪೋರ್ಟ್‌ ವಾಪಸ್‌; ತಿಂಗಳಲ್ಲಿ ಶುಶ್ರೂಷಕಿ ಮನವಿ ಪರಿಗಣಿಸಲು ಕೇಂದ್ರಕ್ಕೆ ಆದೇಶ

0

ಮುಟ್ಟುಗೋಲು ಹಾಕಿಕೊಂಡಿರುವ ಪಾಸ್‌ಪೋರ್ಟ್‌ ಹಿಂದಿರುಗಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದ ಶುಶ್ರೂಷಕಿಯೊಬ್ಬರ ಮನವಿಯನ್ನು ಒಂದು ತಿಂಗಳಲ್ಲಿ ಪರಿಗಣಿಸಿ ನಿರ್ಧಾರ ತಿಳಿಸಬೇಕು ಎಂದು ವಿದೇಶಾಂಗ ಸಚಿವಾಲಯಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

Join Our Whatsapp Group

ಬೆಳ್ತಂಗಡಿ ತಾಲ್ಲೂಕಿನ ಗಂಡಿಬಾಗಿಲು ನೆರಿಯಾ ನಿವಾಸಿ ಶೇನಿ ಜಾಯ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಲೇವಾರಿ ಮಾಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್‌ ಸುಶಾಂತ್‌ ವೆಂಕಟೇಶ್‌ ಪೈ ಅವರು ಅರ್ಜಿದಾರರು ಶುಶ್ರೂಷಕಿಯಾಗಿ ಯೆಮನ್ ದೇಶದಲ್ಲಿ ಕೆಲಸದಲ್ಲಿದ್ದರು. ಅವರಿಗೆ ಕೇಂದ್ರದ ಅಧಿಸೂಚನೆಯ ಬಗ್ಗೆ ಮಾಹಿತಿ ಇರಲಿಲ್ಲ. 2023ರ ಪ್ರಯಾಣದ ವೇಳೆ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಂಡ ಬಳಿಕ ವಲಸೆ ಅಧಿಕಾರಿಗಳು ಷೋಕಾಸ್ ನೋಟಿಸ್ ಜಾರಿ ಮಾಡಿದ್ದರು. ತದನಂತರ ಅರ್ಜಿದಾರರು ತಾವು ಯಾಕೆ ಪ್ರಯಾಣ ಬೆಳೆಸಬೇಕಾಯಿತು ಎಂಬ ಬಗ್ಗೆ ವಿವರಣೆ ನೀಡಿದ್ದರು. ಆದರೂ ಅವರ ಪಾಸ್‌ಪೋರ್ಟ್ ಹಿಂದಿರುಗಿಸಿಲ್ಲ ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ಪ್ರತಿಯಾಗಿ, ಕೇಂದ್ರದ ಪರ ಹಾಜರಿದ್ದ ಉಪ ಸಾಲಿಸಿಟರ್‌ ಜನರಲ್‌ ಎಚ್ ಶಾಂತಿಭೂಷಣ್‌ ಅವರು ಅರ್ಜಿದಾರರು ಪಾಸ್‌ಪೋರ್ಟ್ ಹಿಂದಿರುಗಿಸುವಂತೆ ನಮಗೆ ಯಾವುದೇ ರೀತಿಯ ಅರ್ಜಿ ಸಲ್ಲಿಸಿಲ್ಲ. ಅಷ್ಟಕ್ಕೂ ಯೆಮೆನ್‌ನಲ್ಲಿ ನಾಗರಿಕ ಜನಜೀವನ ಅಸ್ಥಿರತೆಯಲ್ಲಿದೆ. ಸುರಕ್ಷತೆ ದುರ್ಬಲಗೊಂಡಿದೆ ಎಂಬ ಕಾರಣಕ್ಕಾಗಿಯೇ ಯೆಮೆನ್‌ ಪ್ರವಾಸ ನಿಷೇಧಿಸಿ ಕೇಂದ್ರ ವಿದೇಶಾಂಗ ಸಚಿವಾಲಯ 2017ರ ಸೆಪ್ಟೆಂಬರ್ 26ರಂದು ಅಧಿಸೂಚನೆ ಹೊರಡಿಸಿದೆ. ಅರ್ಜಿದಾರರು ಅಧಿಸೂಚನೆ ಉಲ್ಲಂಘಿಸಿರುವ ಕಾರಣ ಪಾಸ್‌ಪೋರ್ಟ್‌ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವಿವರಿಸಿದರು.

ವಾದ ಪ್ರತಿವಾದ ಆಲಿಸಿದ ಪೀಠವು ಅರ್ಜಿದಾರರು ಈ ಆದೇಶ ಪಡೆದ ನಾಲ್ಕು ವಾರಗಳಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು. ಅದನ್ನು ಮುಂದಿನ ನಾಲ್ಕು ವಾರಗಳಲ್ಲಿ ಪರಿಶೀಲಿಸಿ ಸೂಕ್ತ ನಿರ್ಧಾರ ತಿಳಿಸಬೇಕು ಎಂದು ಸೂಚಿಸಿತು.

“ರಾಷ್ಟ್ರೀಯ ಭದ್ರತೆ ಹಾಗೂ ಭಾರತೀಯ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಒಂದಾದ ಯೆಮೆನ್‌ ದೇಶಕ್ಕೆ ಪ್ರವಾಸ ಕೈಗೊಳ್ಳುವುದನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಾಗಿಯೇ ಇದೆ” ಎಂದು ಪೀಠ ಈ ಮೊದಲು ವಿಚಾರಣೆ ವೇಳೆ ಮೌಖಿಕ ಸಹಮತ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು 2010–11ರಿಂದಲೇ ಯೆಮೆನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಪಾಸ್‌ಪೋರ್ಟ್‌ ಅನ್ನು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ 2023ರ ಆಗಸ್ಟ್‌ 20ರಂದು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಂತೆಯೇ, 2017ರ ಅಧಿಸೂಚನೆಯ ಅನುಸಾರ ಮತ್ತು ಪಾಸ್‌ಪೋರ್ಟ್‌ ಕಾಯಿದೆ–1967ರ ಸೆಕ್ಷನ್19ರ ಅನ್ವಯ ಅವರ ಪಾಸ್‌ಪೋರ್ಟ್‌ ಅನ್ನು ಅಮಾನ್ಯಗೊಳಿಸಲಾಗಿದೆ ಎಂಬುದು ಅರ್ಜಿದಾರರ ಆಕ್ಷೇಪವಾಗಿತ್ತು.