ಮನೆ ರಾಜ್ಯ ಪರಿಷ್ಕರಣೆ ಸಮಿತಿ ಕೈಬಿಡಿ, ಹಳೆಯ ಪಠ್ಯಕ್ರಮ ಮುಂದುವರಿಸಿ: ಎಚ್.ವಿಶ್ವನಾಥ್ ಆಗ್ರಹ

ಪರಿಷ್ಕರಣೆ ಸಮಿತಿ ಕೈಬಿಡಿ, ಹಳೆಯ ಪಠ್ಯಕ್ರಮ ಮುಂದುವರಿಸಿ: ಎಚ್.ವಿಶ್ವನಾಥ್ ಆಗ್ರಹ

0

ಮೈಸೂರು(Mysuru): ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ವಿವಾದದ ಸ್ವರೂಪ ಪಡೆದಿದೆ.  ಹೀಗಾಗಿ ಈ ವರ್ಷ ಹಳೆಯ ಪಠ್ಯ ಕ್ರಮವನ್ನೇ ಮುಂದುವರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅಡುಗೂರು ಎಚ್ ವಿಶ್ವನಾಥ್ ಒತ್ತಾಯಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಈ ವರ್ಷ ಹಳೆಯ ಪಠ್ಯ ಕ್ರಮವನ್ನೇ ಮುಂದುವರಿಸಬೇಕು. ಪಠ್ಯಪುಸ್ತಕ ಮುದ್ರಣವಾಗಿ ವಿತರಣೆಯಾಗಿದ್ದರೂ ಅದನ್ನು ವಾಪಸ್‍ ಪಡೆಯಬೇಕು. ಇದರಿಂದ ಸರಕಾರಕ್ಕೆ ನಷ್ಟವಾದರೂ ಪರವಾಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಪಠ್ಯ ಪುಸ್ತಕ ಪರಿಷ್ಕರಣೆ ಸರ್ವ ಸಮ್ಮತವಾಗಿರಬೇಕು. ಜನ ತಾಂತ್ರಿಕವಾಗಿರಬೇಕು, ಜಾತ್ಯಾತೀತ ಆಗಿರಬೇಕು. ಇಡೀ ಶೈಕ್ಷಣಿಕ ಕ್ಷೇತ್ರವನ್ನು ಮಲಿನ‌ಗೊಳಿಸುವ ಹುನ್ನಾರ ಈಗ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರವನ್ನು ಕೇಸರೀಕರಣ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಈ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು‌. ಕೂಡಲೇ ಮುಖ್ಯಮಂತ್ರಿ ಮಧ್ಯೆ ಪ್ರವೇಶಿಸಬೇಕು. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಸಿದ್ದಪಡಿಸಿರುವ ಪಠ್ಯಕ್ರಮವನ್ನು ರದ್ದುಗೊಳಿಸಬೇಕು. ಕಳೆದ ಬಾರಿಯ ಪಠ್ಯಕ್ರಮವನ್ನೇ ಮುಂಬರುವ ಶೈಕ್ಷಣಿಕ ವರ್ಷಕ್ಕೂ ಮುಂದುವರಿಸಬೇಕು. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಸರ್ವರೂ ಒಪ್ಪುವ ಪಠ್ಯಕ್ರಮವನ್ನು ಜಾರಿಗೆ ತರಬೇಕು. ವಿವಿಧ ವಲಯಗಳ ತಜ್ಞರು, ಪೋಷಕರನ್ನು ಒಳಗೊಂಡ ಸಮಿತಿ ರಚಿಸಿ ನೂತನ ಪಠ್ಯ ಕ್ರಮವನ್ನು ಅಳವಡಿಸಬೇಕು ಎಂದು ಮೈಸೂರಿನಲ್ಲಿ ಹೆಚ್ ವಿಶ್ವನಾಥ್ ಹೇಳಿದರು.