ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಕೊಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಘಟಿಸಿದ್ದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆಯ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಕೋಲ್ಕತ್ತಾದ ವಿಚಾರಣಾ ನ್ಯಾಯಾಲಯ ಪೊಲೀಸರು ಮತ್ತು ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ವಿರುದ್ಧವೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪೊಲೀಸರು ಈ ಪ್ರಕರಣದಲ್ಲಿ ಆಘಾತಕಾರಿ ಎನ್ನುವಷ್ಟು ಉದಾಸೀನತೆ ತೋರಿದ್ದಾರೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ತಿಳಿಸಿದ್ದಾರೆ.
ತಾಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಾರಂಭದಿಂದಲೂ ಬಹಳ ಉದಾಸೀನ ಮನೋಭಾವವನ್ನು ತೋರಿದ್ದಾರೆ ಎಂದು ಪ್ರತಿಕ್ರಿಯಿಸಲು ವಿಷಾದವೆನಿಸುತ್ತದೆ ಎಂದಿರುವ ನ್ಯಾಯಾಲಯ ದಾಖಲೆಗಳ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆಯಾಗಿರುವುದನ್ನು ಪ್ರಸ್ತಾಪಿಸಿದೆ.
ಪೊಲೀಸರು ತಮ್ಮೆಲ್ಲಾ ಎಡವಟ್ಟುಗಳ ಜೊತೆಗೆ ಸಂತ್ರಸ್ತೆಯ ತಂದೆ ಪರಿಹಾರ ಪಡೆಯಲು ಮತ್ತು ದೂರು ದಾಖಲಿಸಲು ಎಲ್ಲೆಂದರಲ್ಲಿಗೆ ಅಲೆಯುವಂತೆ ಮಾಡಲಾಗಿದೆ ಎಂದು ನ್ಯಾಯಾಲಯ ಟೀಕಿಸಿತು.
ಆದ್ದರಿಂದ, ತಾಲಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ಇಂತಹ ಕಾನೂನುಬಾಹಿರ ಮತ್ತು ನಿರ್ಲಕ್ಷ್ಯದ ಕೃತ್ಯಗಳ ವಿರುದ್ಧ ಕೋಲ್ಕತ್ತಾದ ಪೊಲೀಸ್ ಆಯುಕ್ತರು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಧೀಶರು ಒತ್ತಿ ಹೇಳಿದರು.
ಪೊಲೀಸರು ಸರಿಯಾದ ಕ್ರಮ ಕೈಗೊಂಡಿದ್ದರೆ ಮೊದಲಿನಿಂದಲೂ ಪ್ರಕರಣದಲ್ಲಿ ಸೂಕ್ಷ್ಮವಾಗಿ ವರ್ತಿಸಿದ್ದರೆ ಪ್ರಕರಣ ಕಡೆಗೆ ಸಂಕೀರ್ಣವಾಗುತ್ತಿರಲಿಲ್ಲ ಎಂದು ನ್ಯಾಯಾಲಯ ತಿಳಿಸಿತು.
ಸಂತ್ರಸ್ತೆಯ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾದ ಆರ್‌ಜಿ ಕರ್ ಆಸ್ಪತ್ರೆಯನ್ನು ಟೀಕಿಸಿದ ನ್ಯಾಯಾಲಯ ಆಸ್ಪತ್ರೆಯ ಕ್ರಮಗಳು ತನಿಖೆಯಲ್ಲಿ ಗಮನಾರ್ಹ ವಿಳಂಬಕ್ಕೆ ಕಾರಣವಾದವು. ಮೃತ ಸಂತ್ರಸ್ತೆಯ ಪೋಷಕರು ಆಕೆಯ ದೇಹವನ್ನು ದೀರ್ಘಕಾಲದವರೆಗೆ ನೋಡಲು ಅನುಮತಿಸಲಿಲ್ಲ. ಆಸ್ಪತ್ರೆಯ ಸಿಬ್ಬಂದಿಯ ಇಂತಹ ವರ್ತನೆಯನ್ನು ಕಾನೂನು ನ್ಯಾಯಾಲಯವಾಗಿ ಖಂಡಿಸುವುದಾಗಿ ನ್ಯಾಯಾಧೀಶರು ಹೇಳಿದರು.
ಸಂತ್ರಸ್ತೆಯ ಸಾವಿನ ಬಗ್ಗೆ ಆಸ್ಪತ್ರೆಯವರು ತಕ್ಷಣ ಪೊಲೀಸರಿಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ಪ್ರಶ್ನಿಸಿದ ನ್ಯಾಯಾಲಯ ಪೊಲೀಸರು ಮತ್ತು ಆಸ್ಪತ್ರೆಯ ತಪ್ಪು ನಡೆಯಿಂದಾಗಿ ಪ್ರಾಸಿಕ್ಯೂಷನ್ ವಾದ ಸಾಬೀತಾಗದೇ ಹೋದರೂ ಸಂಜಯ್ ರಾಯ್ ಅಪರಾಧಿ ಎನ್ನಲು ಸಾಕಷ್ಟು ಸಾಂದರ್ಭಿಕ ಪುರಾವೆಗಳಿವೆ ಎಂಬುದಾಗಿ ತಿಳಿಸಿತು.
“ಇಷ್ಟಾದರೂ ಸಾರ್ವಜನಿಕರ ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಉಗುರಿಗೆ ಉಗುರು ಹಾಗೂ ಜೀವಕ್ಕೆ ಜೀವ ಎಂಬ ಅನಾಗರಿಕ ಪ್ರವೃತ್ತಿಯಿಂದ ಮೇಲೇರಬೇಕು” ಎಂದು ಅದು ಹೇಳಿತು.
ಅಂತೆಯೇ ಅಪರಾಧ ಕ್ರೂರ ಮತ್ತು ಪೈಶಾಚಿಕವಾಗಿದ್ದರೂ ಇದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂಬ ವರ್ಗಕ್ಕೆ ಸೇರದೇ ಇರುವುದರಿಂದ ಮರಣ ದಂಡನೆ ವಿಧಿಸಲಾಗುತ್ತಿಲ್ಲ ಎಂದು ತಿಳಿಸಿತು.
ಆರೋಪಿ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿರಲಿಲ್ಲ ಎಂಬುದೂ ಸೇರಿದಂತೆ ಶಿಕ್ಷೆ ತಗ್ಗಿಸಲು ಕಾರಣವಾದ ಅಂಶಗಳನ್ನು ಪರಿಗಣಿಸಬೇಕಿದೆ ಎಂದು ಅದು ವಿವರಿಸಿತು.