ಮನೆ ಕಾನೂನು ಕಡ್ಡಾಯ ಶಿಕ್ಷಣ ಹಕ್ಕು: ಉನ್ನತಾಧಿಕಾರ ಸಮಿತಿ ಸಭೆ ನಡಾವಳಿಯ ಅಂತಿಮ ವರದಿ ಸಲ್ಲಿಸಲು ಅಮಿಕಸ್‌ಗೆ ಹೈಕೋರ್ಟ್‌...

ಕಡ್ಡಾಯ ಶಿಕ್ಷಣ ಹಕ್ಕು: ಉನ್ನತಾಧಿಕಾರ ಸಮಿತಿ ಸಭೆ ನಡಾವಳಿಯ ಅಂತಿಮ ವರದಿ ಸಲ್ಲಿಸಲು ಅಮಿಕಸ್‌ಗೆ ಹೈಕೋರ್ಟ್‌ ಕಾಲಾವಕಾಶ

0

ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಚಾರವಾಗಿ ಉನ್ನತಾಧಿಕಾರ ಸಮಿತಿ ನಡೆಸಿರುವ ಸಭೆಯ ನಡಾವಳಿ ಕುರಿತು ಅಂತಿಮ ವರದಿ ಸಲ್ಲಿಸಲು ಅಮಿಕಸ್ ಕ್ಯೂರಿ (ಅಮೈಕಸ್‌ ಕ್ಯೂರಿಯೆನ ಅಪಭ್ರಂಶ) ಅವರಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ಎರಡು ವಾರ ಕಾಲಾವಕಾಶ ನೀಡಿದೆ.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದ ಅಪಾರ ಸಂಖ್ಯೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ವಿಶ್ವಜಿತ್ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “2022ರ ಜುಲೈ 6ರಂದು ಹೈಕೋರ್ಟ್ ನೀಡಿದ ನಿರ್ದೇಶನದಂತೆ ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಚಾರವಾಗಿ ಉನ್ನತಾಧಿಕಾರ ಸಮಿತಿ ಜುಲೈ 16ರಂದು ಸಭೆ ನಡೆಸಿದೆ. ಸಭೆಯ ನಡಾವಳಿ ಕುರಿತ ಕರಡು ಪಟ್ಟಿಯನ್ನು ನನಗೆ ಕಳುಹಿಸಿಕೊಡಲಾಗಿದೆ. ಅದನ್ನು ಅಂತಿಮಗೊಳಿಸಿ, ವರದಿ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದನ್ನು ಪರಿಗಣಿಸಿದ ಪೀಠವು ವಿಚಾರಣೆ ಮುಂದೂಡಿತು.

ಕಳೆದ ವಿಚಾರಣೆಯಲ್ಲಿ “ರಾಜ್ಯದಲ್ಲಿ ಅಂಗನವಾಡಿಗಳಿಂದ 6 ವರ್ಷದೊಳಗಿನ 9.8 ಲಕ್ಷಕ್ಕೂ ಅಧಿಕ ಮಕ್ಕಳು ಹಾಗೂ 14 ವರ್ಷ ವಯೋಮಿತಿಯ ಅಂದಾಜು 25 ಸಾವಿರ ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ. ಒಟ್ಟಾರೆ 10 ಲಕ್ಷಕ್ಕೂ ಅಧಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ” ಎಂದು ಫಣೀಂದ್ರ ಅವರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಇದನ್ನು ದಾಖಲಿಸಿಕೊಂಡಿದ್ದ ಪೀಠವು ಈ ಪ್ರಕರಣದಲ್ಲಿ ಹೈಕೋರ್ಟ್ ರಚಿಸಿರುವ ಉನ್ನತಾಧಿಕಾರ ಸಮಿತಿಯು ಜುಲೈ 16ರಂದು ಸಭೆ ನಡೆಸಿ ಶಾಲೆಯಿಂದ ಹೊರಗುಳಿದ ಅದರಲ್ಲೂ ವಿಶೇಷವಾಗಿ ಅಂಗನವಾಡಿಗಳಿಂದ ಹೊರಗುಳಿದ 3ರಿಂದ 6 ವರ್ಷದೊಳಳಗಿನ ಮಕ್ಕಳನ್ನು ಕರೆ ತರುವ ಬಗ್ಗೆ ಯಾವೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಸಲಹೆ ನೀಡಬೇಕು ಎಂದು ನಿರ್ದೇಶಿಸಿತ್ತು.