ಮನೆ ರಾಜ್ಯ ರೋಹಿತ್‌ ಚಕ್ರತೀರ್ಥ ಅವರನ್ನು ದೇಶದ್ರೋಹ ಪ್ರಕರಣದಡಿ ಬಂಧಿಸಿ: ಹರಿಹರ ಆನಂದಸ್ವಾಮಿ

ರೋಹಿತ್‌ ಚಕ್ರತೀರ್ಥ ಅವರನ್ನು ದೇಶದ್ರೋಹ ಪ್ರಕರಣದಡಿ ಬಂಧಿಸಿ: ಹರಿಹರ ಆನಂದಸ್ವಾಮಿ

0

ಮೈಸೂರು: ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಅವರನ್ನು ಸಮಿತಿಯಿಂದ ವಜಾಗೊಳಿಸಿ, ದೇಶದ್ರೋಹ ಪ್ರಕರಣದಡಿ ಬಂಧಿಸಬೇಕು ಎಂದು ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ ಚಾಲನಾ ಸಮಿತಿ ಮುಖಂಡ ಹರಿಹರ ಆನಂದಸ್ವಾಮಿ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನಿಗೆ ಜನಿವಾರ ಹಾಕಿ ಬ್ರಾಹ್ಮಣ ಎಂದು ಹೇಳುವ ಮೂಲಕ ಅವರ ಕ್ರಾಂತಿಕಾರಕ ಚಿಂತನೆಗಳಿಗೆ ಮಸಿ ಬಳಿಯಲಾಗುತ್ತಿದೆ ಎಂದರು.

ಬಿಜೆಪಿ ಅಜೆಂಡಾದಂತೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವ ಮೂಲಕ ಮಕ್ಕಳ ಮನಸ್ಸಿನ ಮೇಲೆ ಸನಾತನ ಹಿಂದೂ ಧರ್ಮದ ವಿಷಬೀಜವನ್ನು ಬಿತ್ತಲು ಸರ್ಕಾರ ಮುಂದಾಗಿದೆ. ಕುವೆಂಪು ರಚಿತ ನಾಡಗೀತೆಯನ್ನು ಅವಹೇಳನ ಮಾಡಿರುವ ಹಾಗೂ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ನಗಣ್ಯ ಮಾಡಿ ವೀರಶೈವ ಧರ್ಮವನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿರುವ ರೋಹಿತ್‌ ಚಕ್ರತೀರ್ಥ ಅಂತಹವರು ವೈದಿಕಶಾಹಿಯ ಭಯೋತ್ಪಾದನೆಯನ್ನು ಹುಟ್ಟು ಹಾಕುತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಅಗತ್ಯ. ಪಠ್ಯ ಪುಸ್ತಕ ಮುದ್ರಣಕ್ಕೆ ಈಗಾಗಲೇ ವ್ಯಯವಾಗಿರುವ ಹಣವನ್ನು ರೋಹಿತ್‌ ಅವರಿಂದಲೇ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದಲ್ಲಿ ಅಪ್ರಬುದ್ಧತೆ ಪ್ರದರ್ಶಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರೈತ ನಾಯಕ ಟಿಕಾಯತ್‌ ಮೇಲೆ ಮಸಿ ಎರಚಿ, ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೆಲವರು ಮಸೀದಿಗಳಲ್ಲಿ ಹಿಂದೂ ದೇವಾಲಯಗಳನ್ನು ಹುಡುಕುತ್ತಿದ್ದಾರೆ. ಈಗಿನ ಹಿಂದೂ ದೇವಾಲಯಗಳು ಈ ಹಿಂದೆ ಬೌದ್ಧ ಮಂದಿರಗಳಾಗಿದ್ದವು. ಆ ದೇವಾಲಯಗಳನ್ನು ಬೌದ್ಧ ಮಂದಿರಗಳೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಬಂಗವಾದಿ ನಾರಾಯಣಪ್ಪ, ಬಾಲಾಜಿ, ಸತೀಶ್‌, ದರ್ಶನ್‌ ಇದ್ದರು