ನವದೆಹಲಿ: ಮೈಸೂರಿನ ಚಾಮುಂಡಿ ಬೆಟ್ಟ ಸೇರಿದಂತೆ 14 ಬೆಟ್ಟಗಳಲ್ಲಿ ಈ ಯೋಜನೆಯ ಆರಂಭಕ್ಕೆ ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ಮಾಡಲಾಗಿದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಬುಧವಾರ ಸದಸ್ಯ ನಾರಾಯಣ ಕೊರಗಪ್ಪ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಕರ್ನಾಟಕ ಸರ್ಕಾರವು 15 ಯೋಜನೆಗಳ ಪ್ರಸ್ತಾವ ಕಳುಹಿಸಿದೆ ಎಂದು ತಿಳಿಸಿದ್ದಾರೆ.
ಈ ಸಲದ ಕೇಂದ್ರ ಬಜೆಟ್’ನಲ್ಲಿ ಪರ್ವತಮಾಲಾ ಯೋಜನೆಯನ್ನು ಪ್ರಕಟಿಸಲಾಗಿದೆ. ಈ ಯೋಜನೆಯ ಆರಂಭವಾದರೆ ಗುಡ್ಡಗಾಡು ಪ್ರದೇಶಗಳಿಗೆ ಜನರ ಸುಲಲಿತ ಪ್ರಯಾಣಕ್ಕೆ ಅನುಕೂಲವಾಗಲಿದೆ. ರೋಪ್’ವೇ ಯೋಜನೆಗಳಿಗಾಗಿ ಸಾಮಾನ್ಯ ಕಾರ್ಯಾಚರಣೆಯ ವಿಧಾನವನ್ನು ಅಭಿವೃದ್ಧಿಪಡಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸಚಿವಾಲಯ ಈಗಾಗಲೇ ನಿರ್ದೇಶನ ನೀಡಿದೆ ಎಂದು ಅವರು ಹೇಳಿದ್ದಾರೆ.
ಯಾವ ಸ್ಥಳಗಳಿಗೆ ರೋಪ್’ವೇ ಪ್ರಸ್ತಾವ:
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ, ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ, ಕೆಮ್ಮಣ್ಣು ಗುಂಡಿ, ಮೈಸೂರಿನ ಚಾಮುಂಡಿ ಬೆಟ್ಟ, ಉಡುಪಿ ಜಿಲ್ಲೆಯ ಕೊಡಚಾದ್ರಿ ಪರ್ವತ, ತುಮಕೂರಿನ ದೇವರಾಯನ ದುರ್ಗ, ಮಧುಗಿರಿ ಕೋಟೆ, ಕೊಪ್ಪಳದ ಅಂಜನಾದ್ರಿ ಬೆಟ್ಟ, ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ಸಾಗರ ಹಿನ್ನೀರು, ಉತ್ತರ ಕನ್ನಡದ ಯಾಣ, ಜೋಯ್ಡಾ ಹಾಗೂ ಚಪೇಲಿ, ಕೊಡಗು ಜಿಲ್ಲೆಯ ಕುಮಾರ ಪರ್ವತ, ಬೆಳಗಾವಿ ಜಿಲ್ಲೆಯ ರಾಜ್ ಹೌಸ್’ಗಡ.