ಮನೆ ಅಪರಾಧ ರೌಡಿ ಸೂರ್ಯ ಬರ್ಬರ ಹತ್ಯೆ

ರೌಡಿ ಸೂರ್ಯ ಬರ್ಬರ ಹತ್ಯೆ

0

ಮೈಸೂರು : ಹಳೆಯ ದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನನ್ನು ಆತ ವಾಸವಿದ್ದ ತೋಟದ ಮನೆಯಲ್ಲಿ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಅನಗನಹಳ್ಳಿ ಗ್ರಾಮದ ಬಳಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಗೋಪಾಲಪುರದ ಪುಷ್ಪಾ ಎಂಬವರ ಮಗ ದೊರೆಸ್ವಾಮಿ ಅಲಿಯಾಸ್ ಸೂರ್ಯ ಎಂದು ಗುರುತಿಸಲಾಗಿದೆ.
ದೊರೆಸ್ವಾಮಿಯನ್ನು ಮಾ.೧೨ರ ರಾತ್ರಿ ತೋಟದ ಮನೆಯಲ್ಲಿ ನಾಲ್ಕಾರು ಕಡೆ ಚಾಕುವಿನಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ,
ತೋಟಕ್ಕೆ ಶುಕ್ರವಾರ ಬೆಳಿಗ್ಗೆ ಸಂಬಂಧಿಕರು ಹೋದ ಸಂದರ್ಭದಲ್ಲಿ ದೊರೆಸ್ವಾಮಿ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ನಂತರ ಇವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದೊರೆಸ್ವಾಮಿ ವಿರುದ್ದ ೪ ರಿಂದ ೫ ಪ್ರಕರಣಗಳಿದ್ದು ಎಂಓಬಿ ಆಗಿದ್ದಾನೆ. ೬ ತಿಂಗಳ ಹಿಂದೆ ಪತ್ನಿ ದೀಪಿಕಾ ಈತನಿಂದ ದೂರವಾಗಿದ್ದಾಳೆ. ಬೆಂಗಳೂರಿನ ಯುವತಿಯೊಬ್ಬಳ ಜೊತೆ ಈತ ತೋಟದ ಮನೆಯಲ್ಲಿ ವಾಸವಿದ್ದನೆಂದು ಹೇಳಲಾಗಿದೆ. ಕೆಲವು ದಿನಗಳಿಂದ ಯುವತಿಯ ಜೊತೆ ಓಡಾಡಿರುವ ಮಾಹಿತಿ ಇದೆ. ಕೃತ್ಯ ನಡೆದ ಹಿಂದಿನ ದಿನವೂ ಸಹ ಯುವತಿಯ ಜೊತೆ ಇದ್ದನೆಂದು ಹೇಳಲಾಗಿದೆ. ಕೃತ್ಯ ನಡೆದ ಸ್ಥಳದಲ್ಲಿ ಹೋಟೆಲ್‌ನಿಂದ ತಂದ ತಿಂಡಿ ಪದಾರ್ಥಗಳು ಕಂಡು ಬಂದಿದೆ. ಮದ್ಯಪಾನ ಮಾಡಿರುವ ಸುಳಿವು ಇದೆ. ಕೃತ್ಯ ನಡೆದ ನಂತರ ಯುವತಿ ನಾಪತ್ತೆಯಾಗಿದ್ದಾಳೆ. ಗ್ರಾಮದ ಜನತೆ ಜೊತೆ ಈತನ ಸಂಭಂಧ ಉತ್ತಮವಾಗಿರಲಿಲ್ಲ ಎಂದು ಹೇಳಲಾಗಿದೆ.

ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್, ಅಡಿಷನಲ್ ಎಸ್ಪಿ ಮಲ್ಲಿಕ್, ಡಿವೈಎಸ್ಪಿ ಕರೀಂ ರಾವತರ್, ಜಯಪುರ ಠಾಣೆ ಎಸ್ಸೈ ಶಿವನಂಜಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊರೆಸ್ವಾಮಿ ಮೇಲೆ ಜಯಪುರ ಠಾಣೆಯಲ್ಲಿ ೩೦೭, ಎನ್.ಸಿ.ಆರ್ ಪ್ರಕರಣ ದಾಖಲಾಗಿದ್ದವು. ಅಲ್ಲದೇ ವಿಜಯನಗರ ಮತ್ತು ಹುಣಸೂರು ತಾಲ್ಲೂಕು ಬಿಳಿಕೆರೆ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಕೊಲೆಯಾದ ವ್ಯಕ್ತಿ ತಾಯಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.