ಮನೆ ಅಪರಾಧ ಮಂಡ್ಯದಲ್ಲಿ ಹಳೇ ದ್ವೇಷಕ್ಕೆ ರೌಡಿಶೀಟರ್ ಬರ್ಬರ ಹತ್ಯೆ..!

ಮಂಡ್ಯದಲ್ಲಿ ಹಳೇ ದ್ವೇಷಕ್ಕೆ ರೌಡಿಶೀಟರ್ ಬರ್ಬರ ಹತ್ಯೆ..!

0

ಮಂಡ್ಯ : ಹಳೆಯ ದ್ವೇಷಕ್ಕೆ ನಡುರಾತ್ರಿಯಲ್ಲಿ ರೌಡಿಶೀಟರ್‌ನನ್ನು ಲಾಂಗ್‌ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದ ಬಳಿ ನಡೆದಿದೆ.

ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಮಹೇಶ್ (40) ಕೊಲೆಯಾದ ರೌಡಿಶೀಟರ್. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳ ಸಂಬಂಧ ಮಹೇಶ್‌ನನ್ನು ರೌಡಿಶೀಟರ‌ನ್ನಾಗಿ ಮಾಡಲಾಗಿತ್ತು.‌ ಜೊತೆಗೆ ಮಹೇಶ್‌ ಗಡಿಪಾರು ಮಾಡಲು ಸಹ ಪೊಲೀಸರು ನಿರ್ಧಾರ ಮಾಡಿದ್ದರು.

ಮಹೇಶ್ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಇದ್ದ. ಕಳೆದ ಎರಡು ದಿನಗಳ ಹಿಂದೆ ಕೋರ್ಟ್‌ಗೆ ಹೋಗಬೇಕೆಂದು ಲಕ್ಷ್ಮೀಸಾಗರ ಗ್ರಾಮಕ್ಕೆ ಬಂದಿದ್ದ. ನಿನ್ನೆ ರಾತ್ರಿ ಜಕ್ಕನಹಳ್ಳಿಯಲ್ಲಿರುವ ಬಾರ್‌ವೊಂದರಲ್ಲಿ ತನ್ನ ಸ್ನೇಹಿತರಾದ ಮರಿಗೌಡ, ಕಿರಣ್ ಜೊತೆಗೆ ಎಣ್ಣೆ ಪಾರ್ಟಿ ಮಾಡಿದ್ದ.

ನಂತರ ಮೂವರು ಒಂದೇ ಬೈಕಿನಲ್ಲಿ ಗ್ರಾಮಕ್ಕೆ ಬರುತ್ತಿದ್ದರು. ಮಧ್ಯರಾತ್ರಿ 12:30 ಕ್ಕೆ ಕಾರಿನಲ್ಲಿ ಬಂದ ನಾಲ್ವರ ಗುಂಪು ಏಕಾಏಕಿ ಲಾಂಗ್‌ನಿಂದ ಮಹೇಶ‌ನ ಮೇಲೆ ಹಲ್ಲೆ ಮಾಡಿ ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ. ಭೀಮ, ರೋಹಿತ್, ಕೇಶವ, ಸಿದ್ದರಾಜು ಎಂಬವರು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮಹೇಶ ಹಾಗೂ ಕೊಲೆ ಮಾಡಿರುವ ಈ ನಾಲ್ವರ ನಡುವೆ ಆಗ್ಗಾಗೆ ಗಲಾಟೆಯಾಗಿ ವೈಷಮ್ಯ ಇತ್ತು. ಹೀಗಾಗಿ‌, ರೌಡಿಶೀಟರ್ ಮಹೇಶ್‌ನ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮೇಲುಕೋಟೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.