ಬೆಂಗಳೂರು : ಕೇರಳ ಮೂಲದ ಖ್ಯಾತ ಉದ್ಯಮಿ ಕಾನ್ಫಿಡೆಂಟ್ ಗ್ರೂಪ್ ಸಿಇಓ ಸಿ.ಜೆ ರಾಯ್ ಅವರು ಇಂದು (ಶುಕ್ರವಾರ) ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯಿಂದ ಪದೇ ಪದೇ ಆದ ದಾಳಿಗೆ ಹೆದರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ನಗರದಲ್ಲಿ ಇವರ ಹೆಸರಿನಲ್ಲಿ ಹಲವು ದೊಡ್ಡ ಹೋಟೆಲ್ಗಳು ಮತ್ತು ರೆಸಾರ್ಟ್ಗಳು ಇದ್ದವು. ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆತ್ಮಹತ್ಯೆಗೆ ಕಾರಣವೇನು? – ಸಿ.ಜೆ.ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್ ಎಂಬ ರಿಯಲ್ ಎಸ್ಟೇಟ್ ಕಂಪನಿಯನ್ನ ಹುಟ್ಟುಹಾಕಿದ್ದರು. ಪದೇ ಪದೇ ಐಟಿ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಕೂಡ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪಿಸ್ತೂಲ್ನಿಂದ ಎದೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐಟಿ ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ಕೂಡ ದಾಳಿ ಮಾಡಿದ್ದರು. ಎರಡು ಇನ್ನೋವಾ ಕಾರುಗಳಲ್ಲಿ 8 ಜನರ ಅಧಿಕಾರಿಗಳ ತಂಡ ಬಂದಿತ್ತು. ಮಧ್ಯಾಹ್ನ ಕಚೇರಿಗೆ ಬಂದಿದ್ದ ಉದ್ಯಮಿ ಸಿ.ಜೆ.ರಾಯ್, 1 ಗಂಟೆ ಐಟಿ ವಿಚಾರಣೆ ಎದುರಿಸಿದ್ದಾರೆ. ಅಧಿಕಾರಿಗಳಿಗೆ ಕೆಲ ದಾಖಲೆ ಸಹ ಕೊಟ್ಟಿದ್ದಾರೆ. ಮತ್ತಷ್ಟು ದಾಖಲೆ ತರಲು ರೂಮ್ಗೆ ಹೋಗಿದ್ದಾರೆ. ಈ ವೇಳೆ ಪಿಸ್ತೂಲ್ನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಒಂದು ಸುತ್ತು ಗುಂಡು ಹಾರಿಸಿಕೊಳ್ಳುತ್ತಿದ್ದಂತೆ ಗನ್ ಕಿತ್ತುಕೊಂಡಿರುವ ಐಟಿ ಅಧಿಕಾರಿಗಳು, ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ ರಾಯ್. ಹೆಚ್ಎಸ್ಆರ್ ಲೇಔಟ್ ನಾರಾಯಣ ಆಸ್ಪತ್ರೆಗೆ ಮೃತದೇಹ ಶಿಫ್ಟ್ ಮಾಡಲಾಗಿದೆ.
ಈ ಘಟನೆ ಬೆನ್ನಲ್ಲೇ ಹಲವು ಅನುಮಾನಗಳು ಮೂಡಿವೆ. ಸಹಜವಾಗಿ ಐಟಿ ಅಧಿಕಾರಿಗಳು ದಾಳಿ ನಡೆಸುವ ವೇಳೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆಯುತ್ತಾರೆ. ಆದ್ರೆ ರಾಯ್ ಬಳಿಯಿದ್ದ ಗನ್ ವಶಕ್ಕೆ ಪಡೆಯದಿರುವ ಬಗ್ಗೆ ಅನುಮಾನ ಹುಟ್ಟುಹಾಕಿದೆ. ಈ ಘಟನೆ ಬಳಿಕ ಬೆಂಗಳೂರು ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಅವರು ಐಟಿ ಅಧಿಕಾರಿಗಳ ವಿಚಾರಣೆ ನಡೆಸಿದ್ದಾರೆ. ನಂತರ ಅಧಿಕಾರಿಗಳು ದಾಳಿ ವೇಳೆ ಸಿಕ್ಕ ದಾಖಲೆಗಳನ್ನು ವಶಕ್ಕೆ ಪಡೆದು ತೆರಳಿದ್ದಾರೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.















