ಬೆಂಗಳೂರು: ಕುಡಿತ ಮತ್ತಿನಲ್ಲಿ ಮಂಡ್ಯದ ರೈಲ್ವೆ ನಿಲ್ದಾಣದಲ್ಲಿ ವ್ಯಾಪಾರ ಮಾಡುತ್ತಿದ್ದ ವೃದ್ಧ ವರ್ತಕನನ್ನು ಕರೆದೊಯ್ದು ಥಳಿಸಿದ್ದ ಆರ್ ಪಿಎಫ್ ಇನ್ಸ್ಪೆಕ್ಟರ್ ನ್ನುಮಾನತು ಮಾಡಲಾಗಿದೆ.
ಥಳಿತದ ತೀವ್ರತೆಗೆ ವೃದ್ಧ ವರ್ತಕ ಹಾಸಿಗೆ ಹಿಡಿದಿದ್ದು, ಕೈಬೆರಳು ಮುರಿದು ದೇಹದಲ್ಲಿ ಹಲವು ಗಾಯಗಳಾಗಿರುವ ಪರಿಣಾಮ ಆತ ಕೆಲಸಕ್ಕೂ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ.
ಘಟನೆ ಹಿನ್ನೆಲೆ ಇನ್ಸ್ಪೆಕ್ಟರ್ ನ್ನು ಅಮಾನತುಗೊಳಿಸಲಾಗಿದ್ದು, ತನಿಖೆಗೆ ಒಳಪಡಿಸಲಾಗಿದೆ. ಇನ್ಸ್ಪೆಕ್ಟರ್ ನ ಕಿರಿಯ ಸಹೋದ್ಯೋಗಿಗಳನ್ನು ವರ್ಗಾವಣೆ ಮಾಡಲಾಗಿದೆ.
ಫೆ.20 ರಂದು ನಡೆದ ಈ ಘಟನೆಯನ್ನು ಮುಚ್ಚಿಹಾಕಲು ಆರ್ ಪಿಎಫ್ ಹಾಗೂ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ ಪಿ) ವಿಭಾಗಗಳು ಯತ್ನಿಸಿವೆ. ಇದರ ಭಾಗವಾಗಿ ಸಂತ್ರಸ್ತ ವರ್ತಕನಿಗೆ ಹಣದ ಆಮಿಷ ಹಾಗೂ ಬೆದರಿಕೆಯನ್ನೂ ಹಾಕಲಾಗಿದೆ.
ಮಂಡ್ಯದಲ್ಲಿನ ಮೂಲಗಳ ಪ್ರಕಾರ ಅಬೂ ರಾಮಚಂದ್ರನ್ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಅಸಮಾಧಾನಗೊಂಡು ಮದ್ಯ ಸೇವಿಸಿದ್ದರು. ಮಂಡ್ಯದ ರೈಲ್ವೆ ನಿಲ್ದಾಣದಲ್ಲಿ 20 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ವರ್ತಕ ನಿಂಗಣ್ಣ (ಪರವಾನಗಿ ಇನ್ನಷ್ಟೇ ನವೀಕರಣಗೊಳ್ಳಬೇಕಿರುವ ಹಿನ್ನೆಲೆ ತಾತ್ಕಾಲಿಕವಾಗಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದಾರೆ) ನನ್ನು ಮದ್ಯದ ಅಮಲಿನಲ್ಲಿದ್ದ ಇನ್ಸ್ಪೆಕ್ಟರ್ ಸನ್ನೆ ಮಾಡಿ ಕರೆದಿದ್ದಾರೆ. ಬೇರೊಬ್ಬ ಗ್ರಾಹಕರೊಂದಿಗೆ ವ್ಯಾಪಾರದಲ್ಲಿದ್ದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಗೆ ಕಾಯಲು ವರ್ತಕ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಇನ್ಸ್ಪೆಕ್ಟರ್ ಆತನನ್ನು ಎಳೆದೊಯ್ದು ಥಳಿಸಿದ್ದಾರೆ.