ಲಾಸ್ ಏಂಜಲೀಸ್: ಗೋಲ್ಡನ್ ಗ್ಲೋಬ್ ಪ್ರಶಸ್ತಿ ಖುಷಿಯಲ್ಲಿರುವ ರಾಜಮೌಳಿ ಅವರ ‘ಆರ್’ಆರ್’ಆರ್’ ಸಿನಿಮಾಕ್ಕೀಗ ಮತ್ತೊಂದು ಪ್ರಶಸ್ತಿ ಗರಿ.
ಆರ್’ಆರ್’ಆರ್ ಚಿತ್ರ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ಸ್‌ನಲ್ಲಿ ಸದ್ದು ಮಾಡಿದೆ.ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ಸ್‌ನ ಐದು ವಿಭಾಗಗಳಲ್ಲಿ ಆರ್’ಆರ್’ಆರ್ ಚಿತ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಶುಕ್ರವಾರ ಲಾಸ್ ಏಂಜಲೀಸ್’ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕ ಎಸ್‌ಎಸ್ ರಾಜಮೌಳಿ ಹಾಗೂ ನಟ ರಾಮಚರಣ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಅತ್ಯುತ್ತಮ ಆ್ಯಕ್ಷನ್ ಸಿನಿಮಾ, ಅತ್ಯುತ್ತಮ ಇಂಟರ್ ನ್ಯಾಷನಲ್ ಫೀಚರ್, ಅತ್ಯುತ್ತಮ ಒರಿಜಿನಲ್ ಸಾಂಗ್ ಹಾಗೂ ಬೆಸ್ಟ್ ಸ್ಟಂಟ್ ವಿಭಾಗದಲ್ಲಿ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ಸ್ ಲಭಿಸಿದೆ.
ಈ ಬಗ್ಗೆ ಮಾತನಾಡಿರುವ ಚಿತ್ರ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು, ನನಗೆ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ಸ್ ಲಭಿಸಿರುವ ಸಂಗತಿ ಇನ್ನೂ ನಂಬಲು ಆಗುತ್ತಿಲ್ಲ. ರೆಕ್ಕೆ ಬಂದು ಹಾರಿದಷ್ಟು ಸಂತೋಷವಾಗುತ್ತಿದೆ. ಈ ಸಾಧನೆಯನ್ನು ನನಗೆ ಪದಗಳಲ್ಲಿ ಹೇಳಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
‘ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್’, ‘ಅರ್ಜೆಂಟೀನಾ 1985’, ‘ಬಾರ್ಡೋ’, ‘ಫಾಲ್ಸ್ ಕ್ರಾನಿಕಲ್ ಆಫ್ ಎ ಹ್ಯಾಂಡ್‌ಫುಲ್ ಆಫ್ ಟ್ರೂತ್ಸ್’, ‘ಕ್ಲೋಸ್’ ಮತ್ತು ‘ಡಿಸಿಷನ್ ಟು ಲೀವ್’ ಮುಂತಾದ ಚಿತ್ರಗಳು ಸ್ಪರ್ಧೆಯಲ್ಲಿದ್ದವು.
‘ಆರ್’ಆರ್’ಆರ್’ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಶ್ರಿಯಾ ಸರನ್ ಮೊದಲಾದವರಿದ್ದಾರೆ.
ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಕಾಲ್ಪನಿಕ ಸ್ನೇಹ ಮತ್ತು ಬ್ರಿಟಿಷ್ ವಿರುದ್ಧದ ಕಾಲ್ಪನಿಕ ಹೋರಾಟದ ಕಥೆಯಾಗಿದೆ.