ಮನೆ ಕಾನೂನು ಡೋಲೊ ಮಾತ್ರೆ ಶಿಫಾರಸ್ಸು ಮಾಡಲು ವೈದ್ಯರಿಗೆ 1 ಕೋಟಿ ರೂ.: ಸುಪ್ರೀಂ ಕೋರ್ಟ್‌ ಗೆ ಮಾಹಿತಿ

ಡೋಲೊ ಮಾತ್ರೆ ಶಿಫಾರಸ್ಸು ಮಾಡಲು ವೈದ್ಯರಿಗೆ 1 ಕೋಟಿ ರೂ.: ಸುಪ್ರೀಂ ಕೋರ್ಟ್‌ ಗೆ ಮಾಹಿತಿ

0

ಡೋಲೊ- 650 ಮಾತ್ರೆ ತಯಾರಕರು ಅದನ್ನು ರೋಗಿಗಳಿಗೆ ಶಿಫಾರಸು ಮಾಡುವುದಕ್ಕಾಗಿ ವೈದ್ಯರಿಗೆ 1,000 ಕೋಟಿ ರೂ. ಮೊತ್ತದ ಉಚಿತ ಕೊಡುಗೆಗಳನ್ನು ನೀಡಿದ್ದಾರೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿಯು ಆರೋಪಿಸಿರುವುದಾಗಿ ಭಾರತೀಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಒಕ್ಕೂಟವು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. [ಭಾರತೀಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಒಕ್ಕೂಟ ಮತ್ತು ಭಾರತ ಸರ್ಕಾರ ನಡುವಣ ಪ್ರಕರಣ].

ಭಾರತೀಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಒಕ್ಕೂಟದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಪಾರಿಖ್, “ರೋಗಿಗಳಿಗೆ ಜ್ವರ ನಿವಾರಕ ಔಷಧವನ್ನು ಶಿಫಾರಸು ಮಾಡಲು ಡೋಲೊ ತಯಾರಕರು ₹ 1,000 ಕೋಟಿಯಷ್ಟು ಮೊತ್ತವನ್ನು ಉಚಿತ ಕೊಡುಗೆಗೆ ವಿನಿಯೋಗಿಸಿದ್ದಾರೆ “ ಎಂದು ತಿಳಿಸಿದರು.

ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರೂ ಇದ್ದ ವಿಭಾಗೀಯ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಇದು ಗಂಭೀರ ಸಮಸ್ಯೆಯಾಗಿದ್ದು ಕೋವಿಡ್ ಸಮಯದಲ್ಲಿ ತಮಗೂ ಇದೇ ಮಾತ್ರೆ ತೆಗೆದುಕೊಳ್ಳುವಂತೆ ಶಿಫಾರಸು ಮಾಡಲಾಗಿತ್ತು ಎಂದರು. ಪ್ರಕರಣದ ಸಂಬಂಧ ಕೇಂದ್ರ ಸರ್ಕಾರ 10 ದಿನಗಳೊಳಗೆ ಉತ್ತರಿಸಬೇಕು ಎಂದು ಅದನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರಿಗೆ ನ್ಯಾಯಾಲಯ ಸೂಚಿಸಿತು.

ತಮ್ಮ ಔಷಧಿಗಳನ್ನು ರೋಗಿಗಳಿಗೆ ಶಿಫಾರಸು ಮಾಡುವುದಕ್ಕಾಗಿ ಪ್ರೋತ್ಸಾಹಕಕರವಾಗಿ ವೈದ್ಯರಿಗೆ ಉಚಿತ ಕೊಡುಗೆಗಳನ್ನು ನೀಡುತ್ತಿರುವ ಔಷಧ ಕಂಪೆನಿಗಳನ್ನು ಹೊಣೆಗಾರರನ್ನಾಗಿ ಮಾಡಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಔಷಧೀಯ ಮಾರಾಟ ಅಭ್ಯಾಸಗಳ ಏಕರೂಪ ಸಂಹಿತೆಗೆ (UCPMP) ಶಾಸನಬದ್ಧ ಬೆಂಬಲ ನೀಡಲು ನಿರ್ದೇಶಿಸಬೇಕೆಂದೂ ಒಕ್ಕೂಟ ಕೋರಿದೆ. ಕೋವಿಡ್ ಸಾಂಕ್ರಾಮಿಕ ತೀವ್ರವಾಗಿದ್ದ ಸಂದರ್ಭದಲ್ಲಿ ರೆಮ್‌ಡಿಸಿವಿರ್‌ ಔಷಧಿಯ ಅತಿಯಾದ ಮಾರಾಟ ಮತ್ತು ಶಿಫಾರಸನ್ನು ಉದಾಹರಣೆಯಾಗಿ ಅರ್ಜಿದಾರರು ಸೂಚಿಸಿದ್ದಾರೆ.

ಆರೋಗ್ಯದ ಹಕ್ಕು ಜೀವಿಸುವ ಹಕ್ಕಿನ ಭಾಗವಾಗಿದ್ದು ನೈತಿಕ ಮಾರುಕಟ್ಟೆ ಅಭ್ಯಾಸಗಳಿಗೆ ಬದ್ಧವಾಗಿರುವ ಔಷಧೀಯ ಕಂಪನಿಗಳು ಇದಕ್ಕೆ ಅತ್ಯಗತ್ಯ ಎಂದು ವಕೀಲೆ ಅಪರ್ಣಾ ಭಟ್ ಅವರ ಮೂಲಕ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ತಿಳಿಸಿದೆ.

ಹಿಂದಿನ ಲೇಖನಸೈಮಾ ಪ್ರಶಸ್ತಿ: ನಾಮ ನಿರ್ದೇಶನಗೊಂಡ ಕನ್ನಡ ಸಿನಿಮಾಗಳಿವು
ಮುಂದಿನ ಲೇಖನಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ 10 ವಿಕೆಟ್‌ ಗಳ ಭರ್ಜರಿ ಜಯ