ಕವಲುದಾರಿ, ಆಪರೇಷನ್ ಅಲಮೇಲಮ್ಮ ಚಿತ್ರಗಳ ಮೂಲಕ ಭರವಸೆಯ ನಟನೆನಿಸಿಕೊಂಡ ರಿಷಿ, ಈಗ “ರುದ್ರ ಗರುಡ ಪುರಾಣ’ ಚಿತ್ರದ ಮೂಲಕ ಮತ್ತೆ ಮಿಂಚಲು ಸಜ್ಜಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಡಿಸೆಂಬರ್ 27ಕ್ಕೆ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರತಂಡ ರಿಲೀಸ್ ದಿನಾಂಕ ಮುಂದೂಡಿದೆ. ಹೊಸ ಅಪ್ಡೆಟ್ ಪ್ರಕಾರ ಸಿನಿಮಾ ಜನವರಿ 24ರಂದು ತೆರೆ ಕಾಣಲಿದೆ.
ಅಶ್ವಿನಿ ಬ್ಯಾನರ್‌ನಡಿ ಲೋಹಿತ್ ನಿರ್ಮಾಣದ ಈ ಚಿತ್ರಕ್ಕೆ ಕೆ.ಎಸ್. ನಂದೀಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಇನ್ವೆಸ್ಟಿಗೇಶನ್ ಡ್ರಾಮಾ ಜೊತೆಗೆ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಎಂಬುದು ಚಿತ್ರತಂಡದ ಮಾತು.
“ಕವಲು ದಾರಿ ಸಿನಿಮಾ ನಂತರ, ನಾನು ಮತ್ತೆ ಈ ಚಿತ್ರದಲ್ಲಿ ಖಾಕಿ ಧರಿಸಿರುವೆ. ಯಾವುದೇ ಗಡಿಬಿಡಿಯಿಲ್ಲದೆ ಅಚ್ಚುಕಟ್ಟಾಗಿ ಚಿತ್ರವನ್ನು ಮಾಡಿದ್ದೇವೆ. ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುವ ಭರವಸೆ ಇದೆ’ ಎನ್ನುತ್ತಾರೆ ನಟ ರಿಷಿ.
ಇವರಿಗೆ ಜೋಡಿಯಾಗಿ ಪ್ರಿಯಾಂಕಾ ಕುಮಾರ್ ನಟಿಸಿದ್ದಾರೆ. ಅಶ್ವಿನಿ ಗೌಡ, ಶಿವರಾಜ್ ಕೆ.ಆರ್. ಪೇಟೆ, ರಾಮ್ ಪವನ್ ಮತ್ತಿತರರು ತಾರಾಬಳಗದಲ್ಲಿದ್ದಾರೆ. ಕೃಷ್ಣಪ್ರಸಾದ್ ಅವರ ಸಂಗೀತ ಸಂಯೋಜನೆ, ಸಂದೀಪ್ ಕುಮಾರ್ ಛಾಯಾಗ್ರಹಣ, ಮನು ಅವರ ಸಂಕಲನ ಚಿತ್ರಕ್ಕಿದೆ.