ಮನೆ ಕ್ರೀಡೆ ಆರ್​ ಸಿಬಿ Vs ಪಂಜಾಬ್ ಪಂದ್ಯ​: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಕ್ತ ಪೊಲೀಸ್ ಬಂದೋ ಬಸ್ತ್

ಆರ್​ ಸಿಬಿ Vs ಪಂಜಾಬ್ ಪಂದ್ಯ​: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಕ್ತ ಪೊಲೀಸ್ ಬಂದೋ ಬಸ್ತ್

0

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಹವಾ ಶುರುವಾಗಿದೆ. ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ​ಸಿಬಿ ಹಾಗೂ ಪಂಜಾಬ್ ನಡುವೆ ಪಂದ್ಯ ನಡೆಯಲಿದೆ‌.

ರಾಮೇಶ್ವರ ಕಫೆ ಸ್ಫೋಟದ ಬಳಿಕ ನಗರ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ.

ಆರ್ ​ಸಿಬಿ ಪಂದ್ಯ ತನ್ನ ತವರಿನಲ್ಲೇ ನಡೆಯುವುದರಿಂದ ಕ್ರೀಡಾಂಗಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳ ದಂಡು ಹರಿದುಬರಲಿದೆ. ಹೀಗಾಗಿ ಕಳೆದೊಂದು ವಾರದಿಂದ ಪೊಲೀಸರು ತೀವ್ರ ತಪಾಸಣೆ ಕಾರ್ಯ ನಡೆಸುತ್ತಿದ್ದಾರೆ. ಬಂದೋಬಸ್ತ್ ​ಗಾಗಿ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಸಾರ್ವಜನಿಕರ ತಪಾಸಣೆಗಾಗಿ 300 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಟೇಡಿಯಂಗೆ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿಯೇ ಪೊಲೀಸರು ಒಳ ಬಿಡಲಿದ್ದಾರೆ.

ಈಗಾಗಲೇ ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳ ಸಂಪೂರ್ಣವಾಗಿ ತಪಾಸಣೆ ನಡೆಸಿವೆ. ಬಂದೋಬಸ್ತ್​ಗಾಗಿ ಡಿ ಸ್ವಾಟ್, ಸಿ ಸ್ವಾಟ್ ಟೀಂಗಳ ಜೊತೆ, ಮೊಬೈಲ್ ಕಮಾಂಡ್ ಸೆಂಟರ್ ವೆಹಿಕಲ್, ನಾಲ್ಕು ಕೆಎಸ್ಆರ್​ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಅಗತ್ಯಬಿದ್ದರೆ ಡ್ರೋಣ್ ಮೂಲಕವೂ ಕಣ್ಗಾವಲಿರಿಸಲಾಗುತ್ತದೆ.‌ ಅಲ್ಲದೇ ಸ್ಟೇಡಿಯಂನ ನಾಲ್ಕೂ ಕಡೆ ವಾಚ್ ಟವರ್ ನಿರ್ಮಿಸಿ ನಿಗಾ ವಹಿಸಲಾಗುತ್ತಿದೆ. ಸ್ಟೇಡಿಯಂನೊಳಗೆ ಎಂದಿನಂತೆ ಬ್ಯಾಗ್, ವಾಟರ್ ಬಾಟಲ್ ಸೇರಿ ಯಾವುದೇ ರೀತಿಯ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ‌. ಪಂದ್ಯ ವೀಕ್ಷಣೆಗೆ ಬರುವ ಸಾರ್ವಜನಿಕರು ಸಂಜೆ 5 ಗಂಟೆಗೆ ಬರಬೇಕು. ಐದು ಗಂಟೆಯಿಂದಲೇ ಸ್ಟೇಡಿಯಂ ಒಳಬಿಡಲಾಗುತ್ತದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನಹೊಸಪೇಟೆ: ಕಲುಷಿತ ನೀರು ಸೇವಿಸಿ 18 ಜನರು ಅಸ್ವಸ್ಥ
ಮುಂದಿನ ಲೇಖನಹೈಕೋರ್ಟ್‌ ನ ಇಬ್ಬರು ನ್ಯಾಯಮೂರ್ತಿಗಳಿಗೆ ಬೆದರಿಕೆ ಕರೆ: ಪ್ರಕರಣ ದಾಖಲಿಸಿಕೊಂಡ ಪೊಲೀಸರು