ಮನೆ ಯೋಗಾಸನ ನಿಯಮ

ನಿಯಮ

0

ವೈಯುಕ್ತಿಕ ನಡವಳಿಕೆಗೆ ಸಂಬಂಧಪಟ್ಟ ನಿಬಂಧನೆಗಳು ನಿಯಮ ಎನ್ನುವ ಹೆಸರಿನಿಂದ ಸುಚಿತವಾಗುತ್ತದೆ. ಯಮ ಎಂದರೆ ಸಾರ್ವತ್ರಿಕವಾದವು. ಪತಂಜಲಮುನಿ ಈ ಐದು ನಿಯಮಗಳನ್ನ ಸೂಚಿಸುತ್ತಾ – ಶೌಚ, ಸಂತೋಷ, ತಪಸ್ಸು, ಸ್ವಧ್ಯಾಯ ಮತ್ತು ಈಶ್ವರ ಪ್ರಣಿಧಾನ.

ಶೌಚ :- ಒಳ್ಳೆಯ ಜೀವನಕ್ಕೆ ಅಗತ್ಯ. ಒಳ್ಳೆಯ ನಡತೆ, ಸ್ನಾನ ಇತ್ಯಾದಿಗಳು ದೇಹವನ್ನು ಬಾಹ್ಯದಲ್ಲಿ ಶುಚಿಯಾಗಿಟ್ಟರೆ, ಆಸನ ಪ್ರಾಣಾಯಾಮಗಳು ಆಂತರಿಕಶುಚಿಗೆ ಕಾರಣವಾಗುತ್ತದೆ. ಆಸನಗಳು ದೇಹದಲ್ಲಿಯ ಜೀವಾಣು ವಿಷಯಗಳನ್ನು ಮತ್ತು ಅಶುದ್ಧ ಪದಾರ್ಥಗಳನ್ನು ತೆಗೆದು ಹಾಕಿ, ದೇಹಕ್ಕೆ ಹೊಸ ರೂಪವನ್ನು ಕೊಡುತ್ತದೆ. ಪ್ರಾಣಾಯಾಮವು ಶ್ವಾಸಕೋಶಗಳನ್ನು ಶುದ್ಧಗೊಳಿಸಿ ರಕ್ತಕ್ಕೆ ಬೇಕಾದ ಆಮ್ಲಜನಕವನ್ನು ನೀಡುತ್ತದೆ. ಮತ್ತು ನರಗಳನ್ನು ಶುದ್ದಿಗೊಳಿಸುತ್ತದೆ. ಈ ದೈಹಿಕ ಶುದ್ಧೀಕರಣಕ್ಕಿಂತ ಮನಸ್ಸಿನಿಂದ ದ್ವೇಷ, ರಾಗ, ಕೋಪ, ಕಾಮ, ಕೃಪಣತೆ, ಭ್ರಮೆ ಮತ್ತು ಅಹಂಕಾರ ಮುಂತಾದವುಗಳನ್ನು ತೆಗೆದುಹಾಕುವುದು ಬಹುಮುಖ್ಯ. ಅದಕ್ಕಿಂತ ಮುಖ್ಯವೆಂದರೆ ಕೆಟ್ಟ ಯೋಚನೆಗಳಿಂದ ಬುದ್ಧಿಯನಿರ್ಮಲೀಕರಣ ಮನಸ್ಸಿನ ಕಲ್ಮಶಗಳೆಲ್ಲ ಭಕ್ತಿ ಎಂಬ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತದೆ. ಈ ಆಂತರಿಕ ಶುದ್ದಿ ಆನಂದವನ್ನು ತೇಜಸ್ಸನ್ನು ನೀಡುತ್ತದೆ. ಅದು ಸಾಮರಸ್ಯವನ್ನು ತಂದು ಮನಸ್ಸಿನ ದುಃಖ ಮತ್ತು ಜಿಗುಪ್ಸೆಯನ್ನು ತೊಡೆದು ಹಾಕುತ್ತದೆ. ಒಬ್ಬನು ಸಹಜವಾಗಿ ಒಳ್ಳೆಯವನಾಗಿದ್ದರೆ ಅವನು ಇತರರಲ್ಲಿ ಒಳ್ಳೆಯ ಗುಣಗಳನ್ನು ಕಾಣುತ್ತಾನೆ. ಕೇವಲ ದುರ್ಗುಣಗಳನ್ನಲ್ಲ. ಇತರರ ವಿಚಾರದಲ್ಲಿ ಒಬ್ಬನು ತಾಳುವ ಗೌರವ, ಆತ್ಮ ಗೌರವವನ್ನು ಹೆಚ್ಚಿಸಿ ತನ್ನ ದುಃಖಗಳನ್ನು ಕಷ್ಟಗಳನ್ನು ನಿವಾರಿಸಿಕೊಳ್ಳಲು ಸಹಾಯವಾಗುತ್ತದೆ. ಯಾವಾಗ ಮನಸ್ಸು ಶುದ್ಧವಾಗಿರುತ್ತದೋ ಆಗ ಅದಕ್ಕೆ ಏಕಾಗ್ರತಯೂ ಬರುತ್ತದೆ. ಈ ಏಕಾಗ್ರತೆಯಿಂದ ಇಂದ್ರಿಗಳನ್ನೂ ಜಯಿಸಲಾಗುವುದು. ಆಗ ಒಬ್ಬನು ದೇಹವೆಂಬ ದೇವಾಲಯದ ಒಳಹೊಕ್ಕು ಮನಸೆಂಬ ಕನ್ನಡಿಯ ಮೂಲಕ ತನ್ನ ಆತ್ಮಸ್ವರೂಪವನ್ನು ಕಾಣುತ್ತಾನೆ.

ದೈಹಿಕ ಸೂಚಿಯ ಜೊತೆಗೆ ಶುದ್ಧವಾದ ಮಾತು, ಯೋಚನೆ, ಆಹಾರಗಳು, ಅಗತ್ಯ ಆಹಾರ ಶುದ್ಧವಾಗಿದ್ದರೆ ಮಾತ್ರ ಸಾಲದು ಅದನ್ನು ಗಳಿಸುವ ಮಾರ್ಗವೂ ಶುದ್ದವಾಗಿರಬೇಕು.

ಆಹಾರವು ದೇಹವನ್ನು ಪೋಷಿಸುವುದೊಂದೇ ಅಲ್ಲದೆ ಅದನ್ನು ನಾಶಪಡಿಸುವುದೂ ಆಗಿದ್ದು, ಅದು ಬ್ರಹ್ಮವಸ್ತುವಿನ ಒಂದು ರೂಪ. ತಾನು ಪ್ರತಿಯೊಂದು ತುತ್ತು ಅನ್ನತಿನ್ನುವಾಗಲು ಅದರಿಂದ ದೇವರ ಸೇವೆಯನ್ನು ಮಾಡಲು ತನಗೆ ಶಕ್ತಿ ಬರುತ್ತಿದೆಯೆಂದು ಭಾವಿಸಬೇಕು. ಹಾಗಾದರೆ ಆಹಾರ ಶುದ್ಧವಾಗುತ್ತದೆ. ಪ್ರತಿಯೊಬ್ಬನು ತಾನು ಹುಟ್ಟಿದ ದೇಶ, ಸಂಪ್ರದಾಯಗಳ ಅನುಸಾರವಾಗಿ ಸಸ್ಯಹಾರಿಯೋ, ಮಾಂಸಾಹಾರಿಯೋ ಆಗಿರುತ್ತಾನೆ. ಅದೊಂದು ವೈಯುಕ್ತಿಕ ವಿಚಾರ. ಆದರೆ ಯೋಗಿಯಾದವನು ಏಕಾಗ್ರತೆಯನ್ನು ಹೊಂದಲು ಆಧ್ಯಾತ್ಮಿಕ ಪ್ರಗತಿಯನ್ನು ಹೊಂದಲು ಸಸ್ಯಾಹಾರವನ್ನೇ ಅಳವಡಿಸಿಕೊಳ್ಳಬೇಕು.

ಆಹಾರವನ್ನು ಆರೋಗ್ಯ, ಶಕ್ತಿ, ಚೈತನ್ಯ ಮತ್ತು ಜೀವನಗಳನ್ನು ವೃದ್ಧಿ ಮಾಡಿಕೊಳ್ಳುವುದಕ್ಕಾಗಿ ತೆಗೆದುಕೊಳ್ಳಬೇಕು. ಅದು ಸರಳವಾಗಿರಬೇಕು. ಹಾಗೆಯೇ ಪುಷ್ಠಿಕರವಾಗಿ ಮೃದುತರವಾಗಿರಬೇಕು. ಖಾರ, ಹುಳಿ, ಉಪ್ಪು, ತೀಕ್ಷ್ಣ, ಹಳಸಿದುದು, ಅರುಚಿಕರವಾದದ್ದು, ಮಂದವಾದದ್ದು, ಮತ್ತು ಅಶುಚಿಯಾದದು– ಇಂತಹ ಆಹಾರವನ್ನು ಉಪಯೋಗಿಸಬಾರದು.

ಯಾವ ತರಹದ ಮತ್ತು ಹೇಗೆ ನಾವು ಆಹಾರವನ್ನು ತೆಗೆದುಕೊಳ್ಳುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಹಸಿವು ಇಲ್ಲದಾಗಲೂ ತಿನ್ನುವ ಪ್ರಾಣಿ ಎಂದರೆ ಮಾನವನ. ಅಲ್ಲದೆ ಜೀವಿಸುವುದಕ್ಕೆ ತಿನ್ನುವುದಲ್ಲದೆ ತಿನ್ನುವುದಕ್ಕೆ ಜೀವಿಸುವ ಪ್ರಾಣಿ ಎಂದರೆ ಮಾನವ. ನಾಲಗೆಯ ರುಚಿಗೆಂದು ನಾವು ತಿನ್ನುವುದಾದರೆ, ಹೆಚ್ಚು ತಿಂದು ಅಜೀರ್ಣಕ್ಕೊಳಗಾಗುತ್ತೇವೆ. ಯೋಗಿಯು ಸಮರಸದಲ್ಲಿ ನಂಬಿಕೆಯುಳ್ಳವನಾಗಿದ್ದು ಜೀವಿಸಿರುವುದರ ಬಗ್ಗೆ ಮಾತ್ರ ಅಗತ್ಯವಿದ್ದಷ್ಟುತಿನ್ನುತ್ತಾನೆ. ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ತನ್ನ ದೇಹವು ಆತ್ಮದ ಆವಾಸಸ್ಥಾನವೆಂದು ಪರಿಗಣಿಸಿ ಅದನ್ನು ಕಾಪಾಡುತ್ತಾನೆ.

ಆಹಾರದ ಜೊತೆಗೆ ನೆಲಸುವ ಸ್ಥಳವೂ ಆಧ್ಯಾತ್ಮಿಕ ಸಾಧನೆಯಷ್ಟೇ ಮುಖ್ಯ. ಅತಿ ದೂರದ ಜಾಗ, ಕಾಡು ಪ್ರದೇಶ, ಜನಜಂಗುಳಿಯ ನಗರ, ಗಲಭೆ ಇರುವ ಸ್ಥಳ — ಇವೆಲ್ಲ ಸಾಧನೆಗೆ ಯೋಗ ಸ್ಥಳಗಳಲ್ಲ. ಎಲ್ಲಿ ಆಹಾರ ಸುಲಭದಲ್ಲಿ ದೊರಕುವುದೋ, ಕ್ರಿಮಿಗಳಿಂದ ಮುಕ್ತವಾದುದೋ, ಪಂಚಭೂತಗಳಿಂದ ಸಂತುಷ್ಟಹೊಂದಿರುವ ಮನೋಹರವಾದ ಪ್ರದೇಶವಾವುದೊ ಅಂಥದನ್ನು ಸಾಧನೆಗೆ ಯೋಗ್ಯ ಸ್ಥಳವೆಂದು ತಿಳಿದು ಅದನ್ನು ಹುಡುಕಬೇಕು. ಸರೋವರದ, ನದಿಯ ಅಥವಾ ಸಮುದ್ರ ತೀರ ಬಹಳ ಆದರ್ಶವಾದದು. ಈ ಆಧುನಿಕ ಕಾಲದಲ್ಲಿ ಅಂತ ಸ್ಥಳ ದೊರಕುವುದು ಕಷ್ಟ. ಆದರೆ ತನ್ನ ಮನೆಯಲ್ಲಿಯೇ ಅಂಥ ಶಾಂತ ವಾತಾವರಣವನ್ನು ಒಬ್ಬನು ನಿರ್ಮಿಸಿಕೊಳ್ಳಬಹುದು, ನಿರ್ಮಲವಾಗಿಸಿಕೊಳ್ಳಬಹುದು. ಗಾಳಿ, ಬೆಳಕು ಬರುವಹಾಗೆ, ಕ್ರಿಮಿಕೀಟಗಳು ಇಲ್ಲದಿರುವ ಹಾಗೆ ಇಟ್ಟುಕೊಳ್ಳಬಹುದು.

ಸಂತೋಷ :- ಸಂತೋಷ ಅಥವಾ ತೃಪ್ತಿಯನ್ನು ಬೆಳೆಸಿಕೊಳ್ಳಬೇಕು. ಯಾವ ಮನಸ್ಸು ತೃಪ್ತವಲ್ಲವೋ ಅದು ಏಕಾಗ್ರತೆಯನ್ನು ಗಳಿಸಲಾರದು. ಯೋಗಿಯು ಯಾವುದನ್ನು ಬಯಸದೇ ಇರುವುದರಿಂದಲೇ ಸಹಜವಾಗಿ ತೃಪ್ತಿಯಿಂದಿರುತ್ತಾನೆ. ತೃಪ್ತಿಯು ಅತ್ಯಂತ ಆನಂದವನ್ನು ಯೋಗಿಗೆ ನೀಡುತ್ತದೆ. ಒಬ್ಬ ತೃಪ್ತಜೀವಿ ದೇವರ ಪ್ರೇಮ ಹೇಗೆಂಬುದನ್ನು ಬಲ್ಲವನಾದುದರಿಂದ ತನ್ನ ಕರ್ತವ್ಯವನ್ನೂ ಎಸಗಿಯೇ ಇರುತ್ತಾನೆ. ಆತನು ಅನುಗ್ರಹ ಪಡೆದವನು ; ಏಕೆಂದರೆ ಆತನಿಗೆ ಸತ್ಯ ಗೊತ್ತಿರುತ್ತದೆ. ಆನಂದ ಸಿಕ್ಕಿರುತ್ತದೆ.

ತೃಪ್ತಿ ಮತ್ತು ಶಾಂತಿ ಮನಸ್ಸಿನ ಸ್ಥಿತಿಗಳು, ಮತ, ಗುಂಪು, ಐಶ್ವರ್ಯ, ವಿದ್ಯೆ ಮುಂತಾದವುಗಳಿಂದ ಮಾನವರಲ್ಲಿ ಭಿನ್ನತೆ ಹುಟ್ಟುವುದು. ಭಿನ್ನತೆಯು ದ್ವೇಷವನ್ನುಂಟುಮಾಡುತ್ತದೆ. ಸುಪ್ತ ಅಥವಾ ಗುಪ್ತ ರೀತಿಯಲ್ಲಿ ವಿರೋಧಗಳನ್ನು ಹುಟ್ಟಿಸಿ ತೊಂದರೆ ಈಡು ಮಾಡುತ್ತದೆ. ಆಗ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಲು ಆಗದೆ, ಅಶಾಂತಿ ಉಂಟಾಗುತ್ತದೆ. ಕಾಮವೆಂಬ ಗಾಳಿಗೆ ಆತ್ಮ ಸಿಗದಿದ್ದರೆ ತೃಪ್ತಿಯು ಶಾಂತಿ ಇರುತ್ತದೆ. ಸಾಧಕನಿಗೆ ಬೇಕಾಗಿರುವುದು ಸತ್ತವನ ಸ್ತಬ್ಧತೆಯಲ್ಲ, ದೇವರಲ್ಲಿ ನೆಲೆಯಾಗಿ ನಿಲ್ಲಬೇಕಾಗಿರುವ ಬುದ್ಧಿಯ ಸಮತೆ.

ತಪಸ್ಸು – ತಪಸ್ಸು ಎನ್ನುವ ಪದ “ತಪ್” ಎನ್ನುವ ಮೂಲದಿಂದ ಬಂದಿದ್ದು ʼಉರಿʼ, ʼಬೆಳಕುʼ, ʼದುಖದಿಂದ ಅನುಭವಿಸುʼ, ʼಬೆಂಕಿಯಿಂದ ಸುಡುʼ ಎನ್ನುವ ಅರ್ಥಗಳನ್ನು ಪಡೆದಿದೆ. ಎಂದರೆ ಯಾವುದೋ ನಿರ್ದಿಷ್ಟಗುರಿಯನ್ನು ಸಾಧಿಸುವ ಸಲುವಾಗಿ ಕಾಯಿಸಿಕೊಳ್ಳುವ ಪ್ರಯತ್ನ ಅದರ ಹಿನ್ನೆಲೆಯಾಗಿರುತ್ತದೆ. ಅದು ಶುದ್ಧೀಕರಣ, ಆತ್ಮಸಂಸ್ಕರಣ ಮತ್ತು ಪ್ರಾಯಶ್ಚಿತ – ಮುಂತಾದ ಗುಣಗಳನ್ನು ಪಡೆದಿರುತ್ತದೆ. ವ್ಯಕ್ತಿತ್ವದ ಬೆಳವಣಿಗೆಯು ಕೂಡ ತಪಸ್ಸೆಂದು ಹೇಳಬಹುದು.

ಪ್ರಯತ್ನಪೂರ್ವಕವಾಗಿ ದೇವರೊಡನೆ ಸಮಾಗಮ ಹೊಂದಲು ಮತ್ತು ಗುರಿಸಾಧನೆಯಲ್ಲಿ ಅಡಚಣೆಗಳಾದ ಕಾಮಗಳನ್ನೆಲ್ಲ ದಹಿಸುವುದೇ ತಪಸ್ಸು. ಆದರ್ಶಪೂರ್ವಕವಾದ ಗುರಿಯು ಜೀವನವನ್ನು ಶುದ್ಧ ಮತ್ತು ದೈವಿಕವನ್ನಾಗಿ ಮಾಡುತ್ತದೆ. ಅಂತ ಧ್ಯೇಯವಿಲ್ಲದಿದ್ದಲ್ಲಿ ಕರ್ಮಕ್ಕೂ, ಧ್ಯಾನಕ್ಕೂ ಯಾವ ಅರ್ಥವೂ ಇರದು. ತಪಸ್ಸಿರದ ಜೀವನ ಪ್ರೇಮವಿಲ್ಲದ ಹೃದಯದಂತೆ. ತಪಸ್ಸಿಲ್ಲದಿದ್ರೆ ಮನಸ್ಸು ಹತ್ತಿರಕ್ಕೆ ಹೋಗಲಾರದು.

ತಪಸ್ಸು ಮೂರು ವಿಧ – ಕಾಯಕ, ವಾಚಿಕ ಮತ್ತು ಮಾನಸಿಕ, ಬ್ರಹ್ಮಚರ್ಯೆ ಮತ್ತು ಅಹಿಂಸೆ – ಇವು ಕಾಯಕ ತಪಸ್ಸು. ಮನಸ್ಸಿಗೆ ನೋವಾಗದ ಮಾತುಗಳನ್ನಾಡುವುದು, ದೇವರ ಸಂಕೀರ್ತನ, ಪರಿಣಾಮದ ಯೋಜನೆ ಇಲ್ಲದೆ ಯಾವಾಗಲೂ ಸತ್ಯವಾಕ್ಯಗಳನ್ನೇ ಆಡುವುದು, ಇತರರ ಬಗ್ಗೆ ಕೆಟ್ಟ ಮಾತುಗಳನ್ನಾಡದಿರುವುದು –  ಇವೆಲ್ಲವೂ ವಾಚಿಕತಪಸ್ಸು. ಸಂತೋಷದಲ್ಲಾಗಲೀ, ದುಃಖದಲ್ಲಾಗಲೀ ಮನಸ್ಸು ಸಮಸ್ಥಿತಿಯಲ್ಲೇ ಇಟ್ಟುಕೊಳ್ಳುವುದು ಮತ್ತು ಆತ್ಮನಿಗ್ರಹ – ಇವು ಮಾನಸಿಕತಪಸ್ಸು.

ವೈಯುಕ್ತಕ ಲಾಭವಿಲ್ಲದೆ ದುಡಿಯುವುದು ತಪಸ್ಸು. ಫಲದ ಆಸೆಯಿಲ್ಲದೆ ದುಡಿಯುವುದೂ ತಪಸ್ಸೇ. ʼತೇನವಿನಾ ತೃಣಮಪಿ ನ ಚಲತಿʼ ಎಂಬ ಶ್ರುತಿ ವಾಕ್ಯದಂತೆ, ದೇವರ ಆಜ್ಞೆಯಿಲ್ಲದೆ ಒಂದು ಹುಲ್ಲುಕಡ್ಡಿ ಕೂಡ ಅಲುಗಾಡದೆಂಬ ಭರವಸೆ ಇಟ್ಟುಕೊಂಡು ದುಡಿಯುವುದು ತಪಸ್ಸು.

ಇಂಥ ತಪಸ್ಸಿನಿಂದ ಯೋಗಿಯು ದೈಹಿಕಶಕ್ತಿಯನ್ನೂ ಮಾನಸಿಕ ಮತ್ತು ಶೀಲಕ್ಕೆ ಸಂಬಂಧಪಟ್ಟ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾನೆ. ಧೈರ್ಯ, ಜ್ಞಾನ, ನೇರತನ ಹಾಗೂ ಸರಳತವನ್ನೂ ವ್ಯಕ್ತಿತ್ವದ ಸಮಗ್ರತೆಯನ್ನು ಬೆಳೆಸಿಕೊಳ್ಳುತ್ತಾನೆ.

ಸ್ವಾಧ್ಯಾಯ – ʼಸ್ವʼ ಎಂದರೆ ತನಗೆ ತಾನೆ, ʼಅಧ್ಯಾಯʼ ಎಂದರೆ ಓದಿಕೊಳ್ಳುವಿಕೆ. ಓದುವ ವಿದ್ಯೆ ಎಂದರೆ ವ್ಯಕ್ತಿಯಲ್ಲಿರತಕ್ಕ ಉತ್ಕೃಷ್ಟ ಗುಣವನ್ನು ವ್ಯಕ್ತಗೊಳಿಸುವುದು. ಸ್ವದಾಯ ಎಂದರೆ ಆತ್ಮವಿದ್ಯೆ.

ಇತರರು ಉಪನ್ಯಾಸ ಮಾಡಿ ಒಬ್ಬನು ಕೇಳುವುದಕ್ಕಿಂತ ಸ್ವಾಧ್ಯಾಯ ಎಂಬುದು ವ್ಯತ್ಯಾಸವಾದುದು. ಸ್ವಧ್ಯಾಯಕ್ಕಾಗಿ ಜನ ಸೇರಿದಾಗ ಹೇಳುವವನಿಗೂ, ಕೇಳುವವನಿಗೂ, ಏಕಮನಸ್ಕಾರರಾಗಿದ್ದುಕೊಂಡು ಪರಸ್ಪರ ಪ್ರೇಮ ಮತ್ತು ಆಧಾರಗಳಿಂದ ಕೂಡಿರುತ್ತಾರೆ. ಉಪದೇಶ ಮಾಡುವ ಗೋಜೇ ಇರುವುದಿಲ್ಲ. ಒಂದು ಹೃದಯ ಮತ್ತೊಂದು ಹೃದಯದೊಂದಿಗೆ ರಕ್ತಗತವಾಗಿ ಜೀವನದ ಅಂಶಗಳಾಗಿ ಪರಿವರ್ತನೆಗೊಳ್ಳುತ್ತದೆ.

ಸ್ವಧ್ಯಾಯವನ್ನು ಆಚರಿಸುವವನು ತನ್ನ ಜೀವನವೆಂಬ ಪುಸ್ತಕವನ್ನು ಓದುತ್ತಾನೆ. ಓದುತ್ತಿರುವ ಹಾಗೆ ಬರೆಯುತ್ತಾನೆ, ತಿದ್ದುತ್ತಾ ಇರುತ್ತಾನೆ. ಅವನಿಗೆ ಜೀವನದ ಬಗ್ಗೆ ಹೊಸ ದೃಷ್ಟಿ ಬೆಳೆಯುತ್ತದೆ. ಸೃಷ್ಟಿ ಎಲ್ಲವೂ ದೈವಾಂಶ ಸಂಭೂತವೆಂದು ಅದು ಭಕ್ತಿಗಾಗಿ ಮಾತ್ರ ಇದೆ. ಭೋಗಕ್ಕಾಗಿ ಅಲ್ಲವೆಂದು ; ತನ್ನಲ್ಲೇ ದೈವಾಂಶ ತುಂಬಿದೆಯೆಂದೂ ತನ್ನಲ್ಲಿರುವ ಚೈತನ್ಯವೇ ವಿಶ್ವವನ್ನು ನಡೆಸುವುದೆಂದು ಅನುಭವಕ್ಕೆ ಬರುತ್ತದೆ.

ಭೂದಾನ ಯಜ್ಞದ ನೇತಾರರಾದ ವಿನೋಬಾಭಾವನೆಯವರ ಅಭಿಪ್ರಾಯದಲ್ಲಿ ಸ್ವಧ್ಯಾಯ ಎಂದರೆ ಪ್ರತಿಯೊಂದು ಅಧ್ಯಯನವೂ ಆಧಾರಗೊಂಡಿರುವ, ತನಗೆ ಯಾವ ಆಧಾರವು ಇಲ್ಲದ ಒಂದು ವಿದ್ಯೆ.

ಜೀವನವನ್ನು ಆರೋಗ್ಯಕರವಾಗಿ, ಸಂತೋಷಕರವಾಗಿ, ಶಾಂತಿಯುತವಾಗಿ, ಮಾಡಲು ಶುಚಿಯಾದ ಸ್ಥಾನದಲ್ಲಿ ದೇವರ ಸಂಬಂಧವಾದ ವಾಙ್ಮಾಯವನ್ನು ಅಧ್ಯಯನ ಮಾಡುವುದು ಅಗತ್ಯ. ಪ್ರಪಂಚದ ಪವಿತ್ರ ತತ್ವಗ್ರಂಥಗಳನ್ನು ಓದುವುದರಿಂದ ಜೀವನದಲ್ಲಿ ಹುಟ್ಟುವ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಲು ಸಾಧಕನಿಗೆ ಅವಕಾಶ ಸಿಗುತ್ತದೆ. ಅವಿದ್ಯೆ ಏನು ನಾಶಗೊಳಿಸಿ ವಿದ್ಯೆಗೆ ಕಾರಣವಾಗುತ್ತದೆ. ಅವಿದ್ಯೆಗೆ ಆದಿ ಇಲ್ಲ, ಆದರೆ ಅಂತ್ಯವಿದೆ. ವಿದ್ಯೆಗೆ ಆದಿ ಇದೆ, ಆದರೆ ಅಂತ್ಯವಿಲ್ಲ. ಸ್ವಾಧ್ಯಾಯದಿಂದ ಸಾಧಕನು ತನ್ನ ಆತ್ಮದ ಲಕ್ಷಣವನ್ನು ತಿಳಿದು ದೇವರೊಡನೆ ಸಮಾಗಮ ಹೊಂದುತ್ತಾನೆ. ಪ್ರಪಂಚದ ಎಲ್ಲಾ ಪವಿತ್ರ ಗ್ರಂಥಗಳು ಎಲ್ಲರ ಓದುವಿಕೆ ಇದೆ. ಯಾವ ಒಂದು ಪಂಗಡ ಉಪಯೋಗಕ್ಕೆ ಮಾತ್ರವಲ್ಲ. ಹೇಗೆ ಜೇನು ಹುಳುಗಳು ಎಲ್ಲಾ ಪುಷ್ಪಗಳಲ್ಲಿಯೂ ಇರುವ ಮಕರಂದವನ್ನು ಹೀರುತ್ತವೆಯೋ ಹಾಗೆಯೇ ಸಾಧಕರು ಎಲ್ಲಾ ಮತಗ್ರಂಥಗಳಿಂದಲೂ ಜ್ಞಾನವನ್ನು ಪಡೆಯುತ್ತಾನೆ. ಮತ್ತು ಆದ್ದರಿಂದ ತನ್ನ ಮತದ ವಿಚಾರವಾಗಿ ಹೆಚ್ಚಿನ ಅರಿವನ್ನೂ ಗಳಿಸುತ್ತಾನೆ.

ಭಾಷಾಶಾಸ್ತ್ರ ಒಂದು ಭಾಷೆಯಲ್ಲ ; ಭಾಷೆಗಳ ವಿಜ್ಞಾನ ಇದನ್ನು ಅರಿಯುವುದರಿಂದ ಒಬ್ಬನು ತನ್ನ ಭಾಷೆಯನ್ನು ಚೆನ್ನಾಗಿ ಅರಿಯಬಲ್ಲನು ಅದೇ ರೀತಿ ಯೋಗ ಎನ್ನುವುದು ಒಂದು ಮತವಲ್ಲ; ಮತಗಳ ವಿಜ್ಞಾನ ಅದರ ವಿಜ್ಞಾನದಿಂದ ತನ್ನ ಮತದ ನಿಜಾಂಶವನ್ನೇ ಅರಿಯಲು ಸಾಧಕರಿಗೆ ಸಹಾಯವಾಗುತ್ತದೆ.

ಈಶ್ವರ ಪ್ರಣಿಧಾನ – ತನ್ನ ಕರ್ಮ ಮತ್ತು ಇಚ್ಛೆಗಳನ್ನು ಈಶ್ವರಾರ್ಪಣ ಮಾಡುವುದೇ ಈಶ್ವರ ಪ್ರಣಿಧನ. ಯಾರಲ್ಲಿ ದೈವಭಕ್ತಿ ಇದೆಯೋ ಅಂತಹವನಿಗೆ ನಿರಾಶೆ ಇರುವುದಿಲ್ಲ. ಆತನಿಗೆ ಜ್ಞಾನ ಸಂಪತ್ತು ಇರುತ್ತದೆ.   ವಿಶ್ವವೆಲ್ಲ ದೇವರ ಸ್ವತ್ತು ಎನ್ನುವ ಜ್ಞಾನ ಯಾರಿಗೆ ಇರುತ್ತದೋ ಅಂತವನನ್ನು ಯಾವ ಅಹಂಕಾರ ಅಥವಾ ಮದ ಪೀಡಿಸುವುದಿಲ್ಲ. ಅವನು ಸ್ವಾರ್ಥಕ್ಕಿಳಿದವನು. ದೇವರ ಸೇವೆಯಲ್ಲಿ ಮಾತ್ರ ಆತನ ತಲೆಬಾಗುತ್ತದೆ.  ಭಕ್ತಿಯೆಂಬ ನೀರನ್ನು ಜನಮನವೆಂಬ ಯಂತ್ರಗಳ ಮೂಲಕ ಹಾಯಿಸಿದರೆ ಅವುಗಳಲ್ಲಿ ಉತ್ಪನ್ನವಾಗುವುದು ಮಾನಸಿಕ ಶಕ್ತಿ ಮತ್ತು ಆಧ್ಯಾತ್ಮಿಕಜ್ಞಾನ. ಭಕ್ತಿಯಿರದ ದೈಹಿಕ ಶಕ್ತಿ ಮಾರಕವಾದರೆ, ಗುಣದ ಬೆಂಬಲವಿಲ್ಲದಲ್ಲಿ ಆರಾಧನೆಯು ಮಾದಕವಾಗುತ್ತದೆ. ಸುಖಗಳಿಗೆ ಮಾತ್ರ ಗಂಟುಬಿದ್ದರೆ ಶಕ್ತಿಯನ್ನು ಕೀರ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

ಸುಖಗಳನ್ನ ಬೆಂಬತ್ತುವ ಇಂದ್ರಿಯಗಳು ಮೋಹವನ್ನು ಉಂಟುಮಾಡುತ್ತದೆ. ಮತ್ತು ಅದನ್ನು ಹೆಚ್ಚು ಮಾಡಲು ಲೋಭ ಬೆಳೆಯುತ್ತದೆ. ಇಂದ್ರಿಗಳು ಸುಖ ಪಡೆಯದಿದ್ದರೆ ಶೋಕ ಹುಟ್ಟುತ್ತದೆ. ಅವುಗಳನ್ನು ಜ್ಞಾನ ಮತ್ತು ಕ್ಷಮೆಗಳು ತಡೆಯಬೇಕು. ಆದರೆ ಮನಸ್ಸನ್ನು ನಿಗ್ರಹಿಸಲು ಹೆಚ್ಚುಕಷ್ಟ ತನ್ನ ಶಕ್ತಿಯನೆಲ್ಲ ಉಪಯೋಗಿಸಿ ಅದನ್ನು ನಿಗ್ರಹಿಸಲು ಅಶಕ್ತನಾದಾಗ ಸರ್ವ ಶಕ್ತಿಗಳ ಮೂಲವಾದ ದೇವರನ್ನೇ ಮೊರೆ ಹೋಗಬೇಕು. ಈ ಹಂತದಲ್ಲಿ ಭಕ್ತಿ ಉತ್ಪನ್ನವಾಗುತ್ತದೆ ಭಕ್ತಿಯಲ್ಲಿ ಮನಸ್ಸು ಬುದ್ಧಿ ಮತ್ತು ಇಚ್ಛೆ ಎಲ್ಲವೂ ದೇವರ ಅಧೀನಕ್ಕೆ ಒಳಗಾಗಬೇಕಾಗುತ್ತದೆ. ಮತ್ತು ಸಾಧಕನು ಪ್ರಾರ್ಥನೆ ಮಾಡುತ್ತಾನೆ. – “ನನಗೆ ಯಾವುದು ಒಳ್ಳೆಯದು ಎಂದು ತೋಚುತ್ತಿಲ್ಲ. ನಿನ್ನ ಇಚ್ಛೆ ಇದ್ದರೆ ಮಾತ್ರ ಎಲ್ಲ ಸರಿಹೋದೀತು.” ಇತರರು ತಮ್ಮ ಕಾಮನೆಗಳನ್ನ ಪೂರ್ಣಗೊಳಿಸಲು ಕೋರುತ್ತಾರೆ. ಭಕ್ತಿಯಲ್ಲಿ ಅಥವಾ ನಿಜವಾದ ಪ್ರೇಮದಲ್ಲಿ ʼನಾನುʼ ಮತ್ತು ʼನನ್ನʼ ಎಂಬ ಮಾತುಗಳಿಗೆ, ಸ್ಥಳವಿಲ್ಲ. “ನಾನು ಮತ್ತು ನನ್ನ ಭಾವನೆಗಳು ಯಾವಾಗ ಹೋಗುವವೋ ಆಗ ವ್ಯಕ್ತಿಯೂ ಆತ್ಮ ತನ್ನ ಪೂರ್ಣ ಬೆಳವಣಿಗೆಯನ್ನು ಹೊಂದುತ್ತದೆ.

ಮನಸ್ಸು ವೈಯುಕ್ತಿಕ, ಕಾಮಗಳ ತೃಪ್ತಿಯಿಂದ ದೂರವಾಗಿ ದೇವರ ಆಲೋಚನೆಗಳಿಂದ ಮಾತ್ರ ತುಂಬಬೇಕು. ಕಾಮಗಳ ತೃಪ್ತಿ ಮನಸ್ಸನ್ನು ಕಾಡುತ್ತಿರುವಾಗ ಇಂದ್ರಿಯಗಳು ಇಂದ್ರಿಯಾರ್ಥಗಳ ಕಡೆ ಓಡುತ್ತಿರುತ್ತದೆ. ಮನಸ್ಸನ್ನು ಕಾಮನೆಗಳಿಂದ ಮುಕ್ತಿಗೊಳಿಸದಿದ್ದರೆ ಹಸಿಯಾದ ಕಟ್ಟಿಗೆಯಿಂದ ಬೆಂಕಿಯನ್ನು ಪ್ರಚಲಿಸುವ ಪ್ರಯತ್ನದಂತೆಯೇ ಭಕ್ತಿಯನ್ನು ಬೆಳೆಸಲು ಅಸಾಧ್ಯ ವಾಗುತ್ತದೆ.

ದೇವರ ಹೆಸರು ಸೂರ್ಯನಿದ್ದಂತೆ. ಅದು ಕತ್ತಲನ್ನು ನಿವಾರಿಸುತ್ತದೆ. ವ್ಯಕ್ತಿಯ ಆತ್ಮವು ಭಗವಂತನನ್ನು ಪೂರ್ಣ ಕಂಡಲ್ಲಿ ಮಾತ್ರ ಪೂರ್ಣತೆಯನ್ನು ಹೊಂದುತ್ತದೆ. “ನಾನು ಮತ್ತು ನನ್ನ” ಎನ್ನುವ ಭಾವನೆಗಳು ಆತ್ಮದ ಮೇಲೆ ಅಪೂರ್ಣವಾದ ಛಾಯೆ ಬೀಳಿಸುತ್ತದೆ, ಹಾಗಾದರಲ್ಲಿ ಸಾಧಕನ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತದೆ.

ಯೋಗಿಯಾದವನು ತನ್ನೆಲ್ಲ ಕರ್ಮಗಳನ್ನು ದೇವರಿಗೆ ಅರ್ಪಿಸುವುದರಿಂದ ಅವು ಆತನನಲ್ಲಿರುವ ದೈವತ್ವವನ್ನೇ ಪ್ರತಿಬಿಂಬಿಸುತ್ತದೆ.