ಮನೆ ಸುದ್ದಿ ಜಾಲ ಶಾಂತಿ ಒಪ್ಪಂದ ಮಾತುಕತೆ ಮುನ್ನವೇ ಉಕ್ರೇನ್‌ ಮೇಲೆ ರಷ್ಯಾ ಡ್ರೋನ್‌ ದಾಳಿ

ಶಾಂತಿ ಒಪ್ಪಂದ ಮಾತುಕತೆ ಮುನ್ನವೇ ಉಕ್ರೇನ್‌ ಮೇಲೆ ರಷ್ಯಾ ಡ್ರೋನ್‌ ದಾಳಿ

0

ಮಾಸ್ಕೋ : ನಾಲ್ಕು ವರ್ಷಗಳ ಯುದ್ಧಕ್ಕೆ ಅಂತ್ಯ ಹಾಡುವ ಮಾತುಕತೆಗೆ ಒಂದು ದಿನ ಮುಂಚಿತವಾಗಿ, ರಷ್ಯಾ ಈ ವರ್ಷ ರಾತ್ರೋರಾತ್ರಿ ಉಕ್ರೇನ್ ಮೇಲೆ ತನ್ನ ಅತಿದೊಡ್ಡ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ನಡೆಸಿದೆ.

ಅಬುಧಾಬಿಯಲ್ಲಿ ಎರಡನೇ ಸುತ್ತಿನ ಮಾತುಕತೆಗಾಗಿ ಉಕ್ರೇನಿಯನ್ ಮತ್ತು ರಷ್ಯಾದ ಸಮಾಲೋಚಕರು ಭೇಟಿಯಾಗುವ ಮೊದಲು ದಾಳಿ ನಡೆದಿದೆ. ‘ರಾಜತಾಂತ್ರಿಕತೆಯತ್ತ ಮುಖ ಮಾಡುವುದಕ್ಕಿಂತ ಜನರನ್ನು ಭಯಭೀತಗೊಳಿಸಲು ರಷ್ಯಾಗೆ ಹೆಚ್ಚು ಮುಖ್ಯವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಷಿಯಲ್‌ ಮೀಡಿಯಾದಲ್ಲಿ ದಾಳಿಯನ್ನು ಖಂಡಿಸಿದ್ದಾರೆ.

ಕಳೆದ ವಾರ ಉಕ್ರೇನ್ ರಾಜಧಾನಿಯ ಮೇಲೆ ದೊಡ್ಡ ಪ್ರಮಾಣದ ದಾಳಿಯನ್ನು ರಷ್ಯಾ ಮಾಡಿರಲಿಲ್ಲ. ಆದರೆ, ದೇಶದ ಇತರ ಭಾಗಗಳಲ್ಲಿ ನಿರಂತರ ದಾಳಿಗಳು ನಡೆದಿರುವುದು ವರದಿಯಾಗಿದೆ.

ಹಲವಾರು ರೀತಿಯ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಬಹುಮಹಡಿ ಕಟ್ಟಡಗಳು, ಉಷ್ಣ ವಿದ್ಯುತ್ ಸ್ಥಾವರವನ್ನು ಹೊಡೆದುರುಳಿಸಲು ಬಳಸಲಾಗಿದೆ ಎಂದು ಉಕ್ರೇನ್ ಇಂಧನ ಸಚಿವ ಡೆನಿಸ್ ಶ್ಮೈಹಾಲ್ ಹೇಳಿದ್ದಾರೆ. ರಷ್ಯಾ 71 ಕ್ಷಿಪಣಿಗಳು ಮತ್ತು 450 ಡ್ರೋನ್‌ಗಳೊಂದಿಗೆ ದಾಳಿ ಮಾಡಿದೆ ಎಂದು ಉಕ್ರೇನಿಯನ್ ವಾಯುಪಡೆ ತಿಳಿಸಿದೆ. ಉಕ್ರೇನ್ 38 ಕ್ಷಿಪಣಿಗಳು ಮತ್ತು 412 ಡ್ರೋನ್‌ಗಳನ್ನು ನಾಶಪಡಿಸಿದೆ ಎಂದು ಹೇಳಿದೆ.