ಜಗತ್ತಿನ ಅತ್ಯಂತ ಮಾರಕ ಕಾಯಿಲೆಗಳಲ್ಲಿ ಕ್ಯಾನ್ಸರ್ ಒಂದು. ಒಮ್ಮೆ ಇದು ಶುರುವಾಗಿ ಬಿಟ್ಟರೆ ದೇಹವನ್ನು ಹಂತಹಂತವಾಗಿ ಸಾಯಿಸುತ್ತಾ ಹೋಗುವಂತಹ ರೋಗ ಇದು. ಕ್ಯಾನ್ಸರ್ಗಳಲ್ಲಿ ಹಲವು ಇವೆ. ಅದರಲ್ಲಿ ಕಾಲನ್ ಅಥವಾ ಕರುಳಿನ ಕ್ಯಾನ್ಸರ್ ಬಹಳ ಸಾಮಾನ್ಯವಾದುದು.
ರಷ್ಯಾದ ವಿಜ್ಞಾನಿಗಳು ಈ ಮಾರಕ ಕರುಳಿನ ಕ್ಯಾನ್ಸರ್ಗೆ ಲಸಿಕೆ ಕಂಡು ಹಿಡಿದಿದ್ದು, ಎಲ್ಲಾ ಪ್ರೀಕ್ಲಿನಿಕಲ್ ಟ್ರಯಲ್ಗಳೂ ಮುಗಿದು ಈಗ ಇದು ಮನುಷ್ಯಬಳಕೆಗೆ ಲಭ್ಯ ಇದೆ ಎಂದು ವರದಿಗಳು ಹೇಳುತ್ತಿವೆ. ರಷ್ಯಾದ ಈ ಪ್ರಾಯೋಗಿಕ ಲಸಿಕೆಯ ಹೆಸರು ಎಂಟೆರೋಮಿಕ್ಸ್. ಒಂದು ವೇಳೆ ಈ ಲಸಿಕೆ ನಿಜವಾಗಿಯೂ ಪರಿಣಾಮಕಾರಿ ಎನಿಸಿದಲ್ಲಿ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಗೇಮ್ ಚೇಂಜರ್ ಎನಿಸಿಕೊಳ್ಳಲಿದೆ.
ಈಗ ಕ್ಯಾನ್ಸರ್ ರೋಗ ಪ್ರಾಥಮಿಕ ಹಂತದಲ್ಲಿದ್ದಾಗ ಚಿಕಿತ್ಸೆಯಿಂದ ಗುಣಮುಖ ಮಾಡುವ ಅವಕಾಶ ಇರುತ್ತದೆ. ಕೆಮೋಥೆರಪಿ ಅಥವಾ ರೇಡಿಯೇಶನ್ ವಿಧಾನಗಳಿಂದ ಕ್ಯಾನ್ಸರ್ಗೆ ಟ್ರೀಟ್ಮೆಂಟ್ ನೀಡಲಾಗುತ್ತದೆ. ಇದು ದುಬಾರಿ, ಜೊತೆಗೆ ರೋಗಿಗೆ ಯಾತನೆ ಕೊಡುವ ಪ್ರಕ್ರಿಯೆ. ಕ್ಯಾನ್ಸರ್ ವಾಸಿಯಾಗುತ್ತದೆ ಎಂದು ಖಾತ್ರಿಯಾಗಿ ಹೇಳುವುದು ಕಷ್ಟ.
ರಷ್ಯಾ ವಿಜ್ಞಾನಿಗಳು ಕಂಡುಹಿಡಿದ ವ್ಯಾಕ್ಸಿನ್ ಪರಿಣಾಮಕಾರಿಯಾ? – ರಷ್ಯಾದ ವಿಜ್ಞಾನಿಗಳು ಕಂಡುಹಿಡಿದಿರುವ ಎಂಟೆರೋಮಿಕ್ಸ್ ಲಸಿಕೆಯು ಬೇರೆ ರೀತಿ ಕೆಲಸ ಮಾಡುತ್ತದೆ. ಅಪಾಯಕಾರಿಯಲ್ಲದ ನಾಲ್ಕು ವೈರಸ್ಗಳ ಸಂಯೋಜನೆ ಮೂಲಕ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲಾಗುತ್ತದೆ. ಅಲ್ಲದೇ ಇಂತಹ ಕ್ಯಾನ್ಸರ್ ವಿರುದ್ಧ ಹೋರಾಡಲು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಈ ವೈರಸ್ಗಳು ಬಲಪಡಿಸುತ್ತವೆ.
ಕಳೆದ ಹಲವು ವರ್ಷಗಳಿಂದ ರಷ್ಯಾದ ವಿಜ್ಞಾನಿಗಳು ನಿರಂತರವಾಗಿ ಪರಿಶ್ರಮ ಹಾಕಿ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಇದರ ಪ್ರೀಕ್ಲಿನಿಕಲ್ ಟ್ರಯಲ್ಗಳೆಲ್ಲವೂ ಯಶಸ್ವಿಯಾಗಿ ಮುಗಿದಿವೆ. ಮನುಷ್ಯನ ಮೇಲಿನ ಪ್ರಯೋಗ ಈಗ ಆರಂಭಿಕ ಹಂತದಲ್ಲಿದೆ. ಮನುಷ್ಯರ ಮೇಲೆ ಇದು ನೂರಕ್ಕೆ ನೂರು ಪರಿಣಾಮಕಾರಿ ಎಂದು ಸಾಬೀತಾದಲ್ಲಿ ಕ್ಯಾನ್ಸರ್ ವಿರುದ್ಧ ಮನುಷ್ಯನ ಹೋರಾಟಕ್ಕೆ ಹೊಸ ಹುರುಪು ಸಿಕ್ಕಂತಾಗುತ್ತದೆ.














