ಬೆಂಗಳೂರು: ಬಿಜೆಪಿಯ ಬೆಂಗಳೂರಿನ ಯಶವಂತಪುರದ ಶಾಸಕ ಎಸ್ಟಿ ಸೋಮಶೇಖರ್ ಮತ್ತು ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಬಿಜೆಪಿಯಲ್ಲಿ ಶಿಸ್ತಿಗೆ ಅವಮಾನ ಮತ್ತು ಪಕ್ಷದ ವಿರೋಧಿ ಚಟುವಟಿಕೆಗೆ ಸಹನೆ ಇಲ್ಲ ಎಂಬುದನ್ನು ಮತ್ತೊಮ್ಮೆ ಹೈಕಮಾಂಡ್ ಸ್ಪಷ್ಟಪಡಿಸಿದೆ. ಬೆಂಗಳೂರಿನ ಯಶವಂತಪುರದ ಶಾಸಕ ಎಸ್.ಟಿ. ಸೋಮಶೇಖರ್ ಮತ್ತು ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್ ಅವರನ್ನು ಪಕ್ಷದ ಶಿಸ್ತು ಉಲ್ಲಂಘನೆಯ ಕಾರಣದಿಂದ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಇದಕ್ಕೆ ಕಾರಣವೆಂದರೆ, ಈ ಇಬ್ಬರು ಶಾಸಕರು ಕಳೆದ ಹಲವಾರು ತಿಂಗಳಿಂದ ನಿರಂತರವಾಗಿ ಪಕ್ಷದ ನಿಯಮ ಮತ್ತು ಶಿಸ್ತನ್ನು ಉಲ್ಲಂಘಿಸುತ್ತಿದ್ದರು. ಮಾರ್ಚ್ ಕೊನೆಯಲ್ಲಿ ಇಬ್ಬರಿಗೂ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೆ, ನೋಟಿಸ್ಗೆ ಸರಿಯಾದ ಉತ್ತರ ನೀಡದ ಕಾರಣ, ಪಕ್ಷ ಕಠಿಣ ಕ್ರಮ ಕೈಗೊಂಡಿದೆ.
ಇಬ್ಬರೂ ಶಾಸಕರು ಬಹಿರಂಗವಾಗಿ ಕಾಂಗ್ರೆಸ್ ಸಭೆಗಳಲ್ಲಿ ಭಾಗವಹಿಸುತ್ತಿದ್ದರು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹೊಗಳುವ ಕಾರ್ಯ ಮಾಡುತ್ತಿದ್ದರು.
ಬಿಜೆಪಿಯ ಸಂಘಟನೆ ಸಭೆಗಳಲ್ಲಿ ಭಾಗವಹಿಸಲು ಆಸಕ್ತಿ ತೋರಿಸದ ಈ ನಾಯಕರು, ಬಿಜೆಪಿ ನಿಲುವಿನ ವಿರುದ್ಧವೇ ಮಾತನಾಡುತ್ತಿದ್ದರು. ಕಾಂಗ್ರೆಸ್ ಸರ್ಕಾರದ ಯೋಜನೆಗಳಿಗೆ ಶಹಬ್ಬಾಸ್ಗಿರಿ ನೀಡುತ್ತ, ಪಕ್ಷದ ಕಡ್ಡಾಯ ಪ್ರತಿಭಟನೆಗಳಲ್ಲಿ ಭಾಗವಹಿಸದೆ ನಿರ್ಲಕ್ಷ್ಯ ತೋರಿದ್ದರು. ಡಿಕೆಶಿ ನಿವಾಸಕ್ಕೆ ಪದೇ ಪದೇ ಭೇಟಿ ನೀಡಿದ ಹಾಗೂ ಕಾಂಗ್ರೆಸ್ ನಾಯಕರಿಗೆ ಬೆಂಬಲ ನೀಡಿದ ಈ ಶಾಸಕರು, ಬಿಜೆಪಿ ನಾಯಕರ ವಿರುದ್ಧವೂ ವ್ಯಂಗ್ಯ, ಟೀಕೆಗಳನ್ನು ಮಾಡುತ್ತಿದ್ದರು.
ಇದಲ್ಲದೆ, ಪಕ್ಷದೊಳಗಿನ ಭಿನ್ನಮತ ಹಾಗೂ ಗುಂಪುಗಾರಿಕೆಗೆ ಆಸರೆ ನೀಡಿದ ಇಬ್ಬರೂ, ಶಿಸ್ತಿನ ಪಾಲನೆಗಾಗಿ ಬಿಜೆಪಿ ತೆಗೆದುಕೊಳ್ಳುತ್ತಿರುವ ನಿಟ್ಟಿಗೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಇದೀಗ ಯಾವುದೇ ದಯೆಯಿಲ್ಲದೆ ಅವರನ್ನು ಉಚ್ಛಾಟಿಸಿದೆ.
ಈ ಕ್ರಮದ ಮೂಲಕ ಬಿಜೆಪಿ ಸ್ಪಷ್ಟ ಸಂದೇಶ ನೀಡಿದ್ದು, ಮುಂದಿನ ದಿನಗಳಲ್ಲಿ ಶಿಸ್ತಿನಲ್ಲದ ವರ್ತನೆ, ಪಕ್ಷ ವಿರೋಧಿ ಚಟುವಟಿಕೆಗಳಿಗೆ ಪಕ್ಷದಲ್ಲಿ ಸ್ಥಳವಿಲ್ಲ.














