ಸಲಿಂಗ ವಿವಾಹ ಕಾನೂನುಬದ್ಧಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್’ಗೆ ಸಲ್ಲಿಸಲಾದ ಮನವಿಗಳನ್ನು ದೇಶದ ಪ್ರಮುಖ ಮುಸ್ಲಿಂ ಧಾರ್ಮಿಕ ವಿದ್ವಾಂಸರ ಸಂಘಟನೆ ಜಾಮಿಯತ್ ಉಲಾಮಾ- ಇ- ಹಿಂದ್ ವಿರೋಧಿಸಿದೆ.
[ಸುಪ್ರಿಯೋ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಸಂಘಟನೆ ಸಲ್ಲಿಸಿರುವ ಅರ್ಜಿಯಲ್ಲಿ ಸಲಿಂಗ ವಿವಾಹದಂತಹ ಪರಿಕಲ್ಪನೆಗಳು ಪಾಶ್ಚಾತ್ಯ ಸಂಸ್ಕೃತಿಯಿಂದ ಆವಿರ್ಭವಿಸಿವೆ. ಇದು ಆಮೂಲಾಗ್ರವಾಗಿ ನಾಸ್ತಿಕ ವಿಶ್ವಾತ್ಮಕ ದೃಷ್ಟಿಕೋನ ಹೊಂದಿದ್ದು ಭಾರತದ ಮೇಲೆ ಅದನ್ನು ಹೇರಬಾರದು ಎಂದು ಕೋರಲಾಗಿದೆ.
ಅರ್ಜಿಯ ಪ್ರಮುಖಾಂಶಗಳು
• ಸಲಿಂಗ ವಿವಾಹ ಕುಟುಂಬ ವ್ಯವಸ್ಥೆಯನ್ನು ರೂಪಿಸುವ ಬದಲು ಅದನ್ನು ನಾಶ ಮಾಡುತ್ತದೆ.
• ಪ್ರಪಂಚದ ಕೆಲ ಭಾಗಗಳಲ್ಲಿ ಇದು ಕಾನೂನುಬದ್ಧವಾಗಿದೆ ಎನ್ನುವುದನ್ನು ಆಧರಿಸಿ ಸಾಂವಿಧಾನಿಕ ನೈತಿಕತೆಯ ತತ್ವವನ್ನು ಅನ್ವಯಿಸುವುದು ಜಗತ್ತಿನ ಇತರ ಭಾಗದ ಸಾಮಾಜಿಕ ವ್ಯವಸ್ಥೆಗೆ ಕೊಡಲಿಪೆಟ್ಟು ನೀಡುತ್ತದೆ.
• ಇಸ್ಲಾಂ ಧರ್ಮವು ಜೈವಿಕ ಪುರುಷರು ಮತ್ತು ಮಹಿಳೆಯರ ನಡುವಿನ ವಿವಾಹವನ್ನು ಮಾತ್ರ ಮಾನ್ಯ ಮಾಡುತ್ತದೆ. ಇಸ್ಲಾಂ ಧರ್ಮದಲ್ಲಿ ತಂದೆ ಮತ್ತು ತಾಯಂದಿರು ಪರಸ್ಪರ ಪೂರಕವಾಗಿದ್ದುಅವರ ಸ್ಥಾನವನ್ನು ಬದಲಿಸುವಂತಿಲ್ಲ.
• ಎಲ್’ಜಿಬಿಟಿಕ್ಯೂಐಎ+ ಪರ ಚಳವಳಿಗಳ ಬೇರು ಪಾಶ್ಚಾತ್ಯ ನಾಸ್ತಿಕ ಸಮಾಜ ಮತ್ತದರ ಮೌಲ್ಯ ವ್ಯವಸ್ಥೆಗಳಲ್ಲಿ ಹುದುಗಿದೆ.
• ಪಾಶ್ಚಿಮಾತ್ಯ ಲೈಂಗಿಕ ಸ್ವಾತಂತ್ರ್ಯ ಚಳವಳಿಗಳ ಹಿನ್ನೆಲೆಯನ್ನು ನಾವು ಶೋಧಿಸಿದರೆ ಇವುಗಳನ್ನು ಮುನ್ನಡೆಸಿದವರು ಕಟ್ಟಾ ನಾಸ್ತಿಕವಾದಿಗಳು. ಲೈಂಗಿಕ ನೈತಿಕತೆಯ ವಿಚಾರದಲ್ಲಿನ ಪ್ರಸಕ್ತ ಬದಲಾವಣೆಗಳ ಮೇಲೆ ಈ ನಿರೀಶ್ವರವಾದಿಗಳ ದೃಷ್ಟಿಕೋನದ ಗಾಢ ಪ್ರಭಾವವಿರುವುದರಿಂದ ಧಾರ್ಮಿಕ ವೈಯಕ್ತಿಕ ಕಾನೂನುಗಳಡಿ ಅದಕ್ಕೆ ಯಾವುದೇ ರೀತಿಯಲ್ಲಿ ಅವಕಾಶವನ್ನು ಕಲ್ಪಿಸಲು ಅನುಮತಿಸಬಾರದು.
ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿರುವ ವಿವಿಧ ಅರ್ಜಿಗಳನ್ನು ಸಾಂವಿಧಾನಿಕ ಪೀಠ ವಿಚಾರಣೆ ನಡೆಸಲಿದೆ ಎಂದು ಕಳೆದ ತಿಂಗಳು ಸುಪ್ರೀಂ ಕೋರ್ಟ್ ತಿಳಿಸಿತ್ತು. ಕೇಂದ್ರ ಸರ್ಕಾರ ಕೂಡ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದನ್ನು ವಿರೋಧಿಸಿದೆ.