ಮೈಸೂರು: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷಿನ್ ಅಡಿಯಲ್ಲಿ (ಎನ್.ಆರ್.ಎಲ್.ಎಂ) ಗ್ರಾಮೀಣ ಭಾಗದ ಸಾಕಷ್ಟು ಮಹಿಳೆಯರು ಆರ್ಥಿಕವಾಗಿ ಸದೃಢಗೊಳುತ್ತಿದ್ದು, ಇನ್ನಷ್ಟು ವಿನೂತನ ರೀತಿಯಲ್ಲಿ ಉಪಯುಕ್ತವಾಗುವಂತಹ ವಿವಿಧ ಉತ್ಪನ್ನಗಳನ್ನು ತಯಾರಿಸಿ ತಮ್ಮದೇ ಬ್ರ್ಯಾಂಡ್ ಅನ್ನು ಸೃಷ್ಠಿಸಿಕೊಂಡು ಮುಖ್ಯವಾಹಿನಿಗೆ ಬರುವಂತೆ ಸಂಜೀವಿನಿ ಸಂಘದ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಮುಖ್ಯ ಪುಸ್ತಕ ಬರಹಗಾರರುಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.
ಇಂದು ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ವಿವಿಧ ಇಲಾಖೆಗಳೊಂದಿಗೆ ಹಲವು ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.
ಸಂಜೀವಿನಿ ಸಂಘಗಳಿಂದ ನೀಡಲಾಗುವ ಪ್ರೋತ್ಸಾಹಧನನ್ನು ಮಹಿಳೆಯರು ವಿನೂತನ ರೀತಿಯಲ್ಲಿ ಇಂಬ್ರಾಯಿಡ್ರಿ ಮಾಡುವುದು, ವಿವಿಧ ತಿನಿಸುಗಳ ತಯಾರಿಕೆ, ಗೊಬ್ಬರ ತಯಾರಿಕೆ, ಅಣಬೆ ಬೆಳೆಯುವುದು ಸೇರಿದಂತೆ ಸ್ಥಳೀಯವಾಗಿ ಬೆಳೆಯುವ ಬಾಳೆಯಿಂದ ಬಾಳೆಕಾಯಿ ಚಿಪ್ಸ್, ಬಾಳೆ ದಿಂಡಿನಿಂದ ಜ್ಯೂಸ್, ಅದರ ತ್ಯಾಜ್ಯಗಳಿಂದ ಗೊಬ್ಬರ ತಯಾರಿಕೆ ಹೀಗೆ ವಿನೂತನ ರೀತಿಯಲ್ಲಿ ಉತ್ಪಾದನೆ ಮಾಡಿ ಅವುಗಳಿಗೆ ಕ್ರಿಯಾತ್ಮಕವಾಗಿ ಬೇಡಿಕೆ ಹೆಚ್ಚಿಸಿಕೊಂಡು ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವಂತೆ ಜೀವನ ಪಾಠ ಮಾಡಿದರು.
ಜಲ ಜೀವನ್ ಯೋಜನೆ ಪ್ರಗತಿ ಪರಿಶೀಲಿಸಿದ ಅವರು, ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಂಪರ್ಕ ಕೆಲಸವನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದರು. ಈ ವೇಳೆ ಅನುಮೋದಿತ ವರದಿಗಿಂತ ನೀರಿನ ಸಂಪರ್ಕವು ಹೆಚ್ಚಾಗಿರುವ ಬಗ್ಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದು, ಉಳಿತಾಯ ಹಣದಿಂದ ಭರಿಸುವಂತೆ ಸಿಇಓ ತಿಳಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆ ಕುರಿತು ಪರಿಶೀಲಿಸಿದ ಅವರು, ನಿಷ್ಕ್ರಿಯವಾಗಿರುವ ಜಾಬ್ ಕಾರ್ಡ್ ಗಳನ್ನು ಕ್ರಿಯಾಶೀಲವಾಗಿಸಲು ಕ್ರಮತೆಗೆದುಕೊಳ್ಳಬೇಕು. ಮಹಿಳಾ ಸಂಘಧ ಮಹಿಳೆಯರನ್ನು ಒಗ್ಗೂಡಿಸಿಕೊಂಡು ಅಭಿಯಾನಗಳ ಮೂಲಕ ಬೇಡಿಕೆ ಸಂಗ್ರಹಿಸಿ ಕೆಲಸ ನೀಡುವಂತೆ ಸೂಚಿಸಿದ ಅವರು, ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುಂತೆ ಇದೇ ವೇಳೆ ತಿಳಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ಆಸ್ತಿ ಸಮೀಕ್ಷೆ ಕುಂಠಿತಗೊಂಡಿದ್ದು, ಇದರಿಂದ ತೆರಿಗೆ ಸಂಗ್ರಹಿಸುದು ಕಷ್ಟವಾಗುತ್ತದೆ. ಆದ್ದರಿಂದ ಶೀಘ್ರವೇ ಆಸ್ತಿ ಸಮೀಕ್ಷೆ ಪೂರ್ಣಗೊಳಿಸುವಂತೆ ತಿಳಿಸಿದ ಅವರು ಸಕಾಲದಲ್ಲಿ ಯಾವುದೇ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಅಲ್ಲದೆ, ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮವಹಿಸಬೇಕು, ಎಲ್ಲಾ ಚರಂಡಿ, ನೀರಿನ ಟ್ಯಾಂಕ್ ಗಳು, ದನಗಳು ಕುಡಿಯುವ ನೀರಿನ ತೊಟ್ಟಿಯಲ್ಲಿ ಕಾಲ ಕಾಲಕ್ಕೆ ಸ್ವಚ್ಛಗೊಳಿಸುತ್ತಿರುವ ಬಗ್ಗೆ ಖಾತರಿ ಪಡಿಸಿಕೊಂಡರು.
ಕೂಸಿನ ಮನೆಗೆ ಮೆಚ್ಚುಗೆ:
ಸಭೆ ಬಳಿಕ ಪಂಚಾಯಿತಿ ಎದುಗಿರಿನ ಕೂಸಿನ ಮನೆಗೆ ಭೇಟಿ ನೀಡಿದ ಅವರು, ಕೂಸಿನ ಮನೆಯ ಅತ್ಯಾಕರ್ಷಕ ಪೇಯಿಟಿಂಗ್, ಚಾರ್ಟ್ಗಳ ಪ್ರದರ್ಶನ ಹಾಗೂ ಕಟ್ಟಡವು ವಿಶಾಲ ಹಾಗೂ ಸುಸಜ್ಜಿತವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಬಳಿಕ ದಾಖಲಾತಿ ಪುಸ್ತಕಗಳನ್ನು ಪರಿಶೀಲಿಸಿ, ಜಿಲ್ಲಾ ಪಂಚಾಯಿತಿ ಸಮಿತಿಯಿಂದ ಸಿದ್ದಪಡಿಸಿರುವ ಆಹಾರದ ಮೆನುವಿನಲ್ಲಿ ಬದಲಾವಣೆ ಬೇಕಿದಲ್ಲಿ ತಿಳಿಸುವಂತೆ ಕೇರ್ ಟೇಕರ್ಸ್ ಗಳಿಗೆ ತಿಳಿಸಿದರು.
ಬಳಿಕ ನರೇಗಾ ಯೋಜನೆಯಡಿ ಬಾಳೆ ಬೆಳೆದಿದ್ದ ಫಲಾನುಭವಿ ಮಹೇಶ್ ಎಂಬುವವರು ಬಾಳೆ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಉದ್ಯೋಗ ಖಾತರಿ ಯೋಜನೆ ಅಡಿ ವೈಯಕ್ತಿಕ ಕಾಮಗಾರಿಗಳಿಗೆ ಇದ್ದ 2.5 ಲಕ್ಷ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ, ಹಾಗಾಗಿ ಇನ್ನಷ್ಟು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಂಡು ಆರ್ಥಿಕವಾಗಿ ಸದೃಢಗೊಳ್ಳುವಂತೆ ಫಲಾನುಭವಿಗೆ ಸೂಚಿಸಿದರು.
ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ, ಪರಿಶೀಲನೆ
ಹದಿನಾರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಎಲ್ಲಾ ಕೊಠಡಿ, ಕಾರ್ಯವೈಖರಿ ಹಾಗೂ ದಾಖಲಾತಿ ನಿರ್ವಹಣೆ ಪುಸ್ತಕಗಳನ್ನು ಕುಲಂಕಷವಾಗಿ ಪರಿಶೀಲಿಸಿದರು. ಅಲ್ಲದೆ ಆಸ್ಪತ್ರೆಯಲ್ಲಿದ್ದ ರೋಗಿಗಳೊಂದಿಗೆ ಖುದ್ದು ಮಾತನಾಡಿ, ಆಸ್ಪತ್ರೆಯ ವಾತವಾರಣ, ಸಿಬ್ಬಂದಿಯ ಕಾರ್ಯವೈಖರಿ, ಇಲ್ಲಿನ ಸೇವೆ ಕುರಿತು ಮಾಹಿತಿ ಸಂಗ್ರಹಿಸಿದರು.
ಈ ವೇಳೆ, ನರೇಗಾ ಸಹಾಯಕ ನಿರ್ದೇಶಕರಾದ ಶಿವಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಲಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ವಿವೇಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಕುಮಾರ್, ಕಾರ್ಯದರ್ಶಿ ಸೇರಿ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.