ಮನೆ ರಾಷ್ಟ್ರೀಯ ಜ್ಞಾನವಾಪಿ ಮಸೀದಿ ಪ್ರಕರಣ: ಮೇ 23ಕ್ಕೆ ಮುಂದಿನ ವಿಚಾರಣೆ

ಜ್ಞಾನವಾಪಿ ಮಸೀದಿ ಪ್ರಕರಣ: ಮೇ 23ಕ್ಕೆ ಮುಂದಿನ ವಿಚಾರಣೆ

0

ವಾರಣಸಿ(Varanasi)-ಜ್ಞಾನವಾಪಿ ಮಸೀದಿ ಪ್ರಕರಣದ ಮುಂದಿನ ವಿಚಾರಣೆಯನ್ನು ವಾರಾಣಸಿ ನ್ಯಾಯಾಲಯವು ಮೇ 23ಕ್ಕೆ ನಿಗದಿ ಪಡಿಸಿದೆ.

ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ನಡೆಯಲಿದೆ. ಅಲ್ಲಿಯವರೆಗೆ ವಾರಣಾಸಿಯ ಸಿವಿಲ್ ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಮುಂದುವರಿಸಬಾರದು ಎಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮೇ 23ಕ್ಕೆ ನಿಗದಿಪಡಿಸಲಾಗಿದೆ ಎಂದು ಹಿಂದೂ ಪರ ವಕೀಲ ಮದನ್‌ ಮೋಹನ್‌ ಯಾದವ್‌ ತಿಳಿಸಿದ್ದಾರೆ.

ಜ್ಞಾನವಾಪಿ ಮಸೀದಿಯ ಹೊರಗಿನ ಗೋಡೆ ಮೇಲಿರುವ ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ಪ್ರತಿನಿತ್ಯ ಪೂಜೆ ಮಾಡಲು ಅನುಮತಿ ಕೋರಿ ದೆಹಲಿಯ ಮಹಿಳೆಯರಾದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು ಮನವಿ ಸಲ್ಲಿಸಿದರು. ಈ ಮನವಿಯ ಮೇರೆಗೆ ನ್ಯಾಯಾಧೀಶ ದಿವಾಕರ್ ಅವರು ಮಸೀದಿಯ ವಿಡಿಯೋಗ್ರಫಿ ಮತ್ತು ಸಮೀಕ್ಷೆಗೆ ಆದೇಶಿಸಿದ್ದರು.

2021 ಏಪ್ರಿಲ್ 18 ರಂದು ನ್ಯಾಯಾಲಯದ ಮೆಟ್ಟಿಲೇರಿದ್ದ ಮಹಿಳೆಯರು ಮಸೀದಿ ಗೊಡೆ ಮೇಲಿರುವ ವಿಗ್ರಹಗಳಿಗೆ ಯಾವುದೇ ಹಾನಿ ಮಾಡದಂತೆ ತಡೆಯಲು ನ್ಯಾಯಾಲಯದ ಆದೇಶವನ್ನು ಕೋರಿದ್ದರು. ಆದರೆ, ಮಸೀದಿಯೊಳಗೆ ವಿಡಿಯೋಗ್ರಫಿ ಮಾಡಲು ನ್ಯಾಯಾಲಯವು ಯಾವುದೇ ಆದೇಶವನ್ನು ನೀಡಿಲ್ಲ. ಮಸೀದಿ ಪ್ರದೇಶವನ್ನು ಸುತ್ತುವರಿದ ಬ್ಯಾರಿಕೇಡ್‌ಗಳ ಹೊರಗೆ ‘ಚಬುತ್ರ’ (ಅಂಗಣ)ವರೆಗೆ ಮಾತ್ರ ಸಮೀಕ್ಷೆ ಮಾಡಬೇಕೆಂದು ಮಸೀದಿ ಆಡಳಿತ ಸಮಿತಿಯ ವಕೀಲರು ಈ ಹಿಂದೆ ವಾದಿಸಿದ್ದರು.

ನ್ಯಾಯಾಲಯದ ಆಯುಕ್ತರು ಶುಕ್ರವಾರ ಜ್ಞಾನವಾಪಿ-ಶೃಂಗಾರ ಗೌರಿ ಸಂಕೀರ್ಣದಲ್ಲಿರುವ ಮಸೀದಿಯ ಹೊರಗಿನ ಕೆಲವು ಪ್ರದೇಶಗಳಲ್ಲಿ ಎರಡು ಕಡೆಯವರ ಘೋಷಣೆಗಳ ನಡುವೆ ಅನಿರ್ದಿಷ್ಟ ಸಮೀಕ್ಷೆಯನ್ನು ನಡೆಸಿದ್ದರು. ಈ ವೇಳೆ, ನ್ಯಾಯಾಲಯದಿಂದ ನೇಮಕಗೊಂಡ ಕಮಿಷನರ್ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂದು ಮುಸ್ಲಿಂ ಕಡೆಯವರು ಆರೋಪಿಸಿದ್ದರು. ಕೋರ್ಟ್ ಆದೇಶವಿಲ್ಲದೆ ಅವರು ಜ್ಞಾನವಾಪಿ ಮಸೀದಿಯೊಳಗೆ ವಿಡಿಯೋಗ್ರಫಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿ ಅವರನ್ನು ಬದಲಾಯಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಹಿಂದಿನ ಲೇಖನವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್:‌ ಚಿನ್ನ ಗೆದ್ದ ಭಾರತದ ನಿಖತ್ ಜರೀನ್‌
ಮುಂದಿನ ಲೇಖನಜೈಲು ಶಿಕ್ಷೆ ಹೊರತಾಗಿಯೂ ಸಿಧು ಚುನಾವಣೆಯಲ್ಲಿ ಸ್ಪರ್ಧಿಸಬಹುದು: ಕಾನೂನು ತಜ್ಞರು