ಮನೆ ಕಾನೂನು 14 ತಿಂಗಳ ಬಳಿಕ ಸ್ಯಾಂಟ್ರೋ ರವಿಗೆ ಜಾಮೀನು ಮಂಜೂರು

14 ತಿಂಗಳ ಬಳಿಕ ಸ್ಯಾಂಟ್ರೋ ರವಿಗೆ ಜಾಮೀನು ಮಂಜೂರು

0

ಮೈಸೂರು: ಅತ್ಯಾಚಾರ, ಕೊಲೆ ಬೆದರಿಕೆ ಪ್ರಕರಣದ ಆರೋಪಿ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಗೆ ಮೈಸೂರಿನ ಆರನೇ ಹೆಚ್ಚುವರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಬಂಧಿತನಾಗಿ 14 ತಿಂಗಳ ಕಾಲ ಜೈಲಿನಲ್ಲಿದ್ದ ರವಿ ಆರೋಗ್ಯ ಸಮಸ್ಯೆ ನಿಮಿತ್ತ ಜಾಮೀನು ನೀಡಬೇಕು ಎಂದು ಮಾಡಿದ್ದ ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ಜಾಮೀನು ಮಂಜೂರು ಮಾಡಿದ್ದಾರೆ.

Join Our Whatsapp Group

ಹಲವು ಪ್ರಕರಣಗಳಲ್ಲಿ ರಾಜ್ಯ ಸರ್ಕಾರಕ್ಕೆ ತಲೆನೋವಾಗಿದ್ದ ಸ್ಯಾಂಟ್ರೋ ರವಿಯನ್ನು ಕಳೆದ ವರ್ಷ ಗುಜರಾತ್‌ನಿಂದ ಬಂಧಿಸಿ ಕರೆತರಲಾಗಿತ್ತು. ಈ ಮೊದಲು ಆರೋಪಿ ಜಾಮೀನಿಗೆ ಹೈಕೋರ್ಟ್, ಬಳಿಕ ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ತಿರಸ್ಕೃತವಾಗಿತ್ತು. ಇದೀಗ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮೈಸೂರಿನ ಆರನೇ ಹೆಚ್ಚುವರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಸ್ಯಾಂಟ್ರೋ ರವಿ ವಿರುದ್ಧ ಕಳೆದ ವರ್ಷ ಮೈಸೂರಿನಲ್ಲಿ ವೇಶ್ಯಾವಾಟಿಕೆ, ಅಕ್ರಮ ವರ್ಗಾವಣೆ, ಅತ್ಯಾಚಾರ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣ ದಾಖಲಾಗಿತ್ತು. ಬಂಧನ ವೇಳೆ ಆರೋಪಿಯಿಂದ ಮೊಬೈಲ್ ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಸಿಐಡಿಗೆ ವಹಿಸಿ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಆದೇಶಿಸಿದ್ದರು.

ನಂತರ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ಸಿಐಡಿ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಮೈಸೂರಿನ ಪೊಲೀಸರು ದಾಖಲೆಗಳನ್ನು ಸಿಐಡಿ ತಂಡಕ್ಕೆ ವಹಿಸಿದ್ದರು. ಆರೋಪಿ ವಿರುದ್ಧ ಪ್ರಕರಣ ದಾಖಲಾಗುವುದರಿಂದ ಹಿಡಿದು ಆತನ ಬಂಧನದವರೆಗೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಪಾತ್ರವು ಮುಖ್ಯವಾಗಿದೆ.